ಹರಾರೆ: ಜಿಂಬಾಬ್ವೆ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿರುವ ಭಾರತದ 15 ವರ್ಷದ ಉದಯೋನ್ಮುಖ ಬ್ಯಾಟರ್ ವೈಭವ್ ಸೂರ್ಯವಂಶಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅಪರೂಪದ ವಿಶ್ವದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಭಾನುವಾರ ಹರಾರೆಯಲ್ಲಿ ನಡೆದ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಅಬ್ಬರಿಸಿದ ಸೂರ್ಯವಂಶಿ, 49 ಎಸೆತಗಳಲ್ಲಿ 8 ಬೌಂಡರಿ ಹಾಗೂ 4ಸಿಕ್ಸರ್ಗಳ ನೆರವಿನಿಂದ 81 ರನ್ ಬಾರಿಸಿ ಔಟಾದರು. ವೆಸ್ಲಿ ಮಾಧೇವೆರೆ ಎಸೆತದಲ್ಲಿ ಸಿಂಗಲ್ ಗಳಿಸುವ ಮೂಲಕ ತಮ್ಮ ಎರಡನೇ ಟಿ20ಐ ಅರ್ಧಶತಕ ಪೂರೈಸಿದ ಅವರು, 16 ವರ್ಷ ತುಂಬುವ ಮುನ್ನವೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಎರಡು ಅರ್ಧಶತಕ ಗಳಿಸಿದ ವಿಶ್ವದ ಮೊದಲ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಾದಿಯಲ್ಲಿ ಅವರು ನೇಪಾಳದ ಕುಶಾಲ್ ಮಲ್ಲಾ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಕುಶಾಲ್ ಮಲ್ಲಾ 16 ವರ್ಷ ತುಂಬುವ ಮೊದಲು ಕೇವಲ ಒಂದು ಅರ್ಧಶತಕ ಗಳಿಸಿದ್ದರು.
ಅಷ್ಟೇ ಅಲ್ಲದೆ, 15ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ನ ಯಾವುದೇ ಸ್ವರೂಪದಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ ಜಗತ್ತಿನ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ಸಾಧನೆಯನ್ನೂ ವೈಭವ್ ತಮ್ಮದಾಗಿಸಿಕೊಂಡಿದ್ದಾರೆ.
ತಮ್ಮ ಚೊಚ್ಚಲ ಜಿಂಬಾಬ್ವೆ ಪ್ರವಾಸವನ್ನು ಅತ್ಯಂತ ಸ್ಮರಣೀಯವಾಗಿಸಿಕೊಂಡಿರುವ ವೈಭವ್, ಸರಣಿಯ ಮೊದಲ ಪಂದ್ಯದಲ್ಲೇ ಕೇವಲ 18 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಟಿ20 ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. ತದನಂತರ ಎರಡನೇ ಪಂದ್ಯದಲ್ಲಿ 9 ಎಸೆತಗಳಲ್ಲಿ 20 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಆಟದ ನೆರವಿನಿಂದ ನಿಗದಿತ 20ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192ರನ್ ಪೇರಿಸಿತು. ಬೃಹತ್ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ಗಳಷ್ಟೇ ಗಳಿಸಲು ಶಕ್ತವಾಯಿತು. ರಿಯಾನ್ ಬುರಿ ಅಂತಿಮವಾಗಿ 54ರನ್ ಗಳಿಸಿ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಂಡೆಗೆ ತಲುಪಿಸಲು ಸಾಧ್ಯವಾಗಲಿಲ್ಲ.
ಅಂತಿಮವಾಗಿ 35ರನ್ಗಳ ಜಯ ಸಾಧಿಸಿದ ಭಾರತ ತಂಡ, 3-0 ಅಂತರದಲ್ಲಿ ಸರಣಿಯನ್ನು ಸಂಪೂರ್ಣವಾಗಿ ತನ್ನ ವಶಪಡಿಸಿಕೊಂಡಿತು. ಅದ್ಭುತ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಎರಡೂ ಗೌರವಗಳಿಗೆ ಭಾಜನರಾದರು.

