ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್ಟಿಡಿಸಿ) ರಾಜ್ಯದಾದ್ಯಂತ ನಿರ್ವಹಿಸುತ್ತಿರುವ ಮಯೂರ ಹೋಟೆಲ್ಗಳ ಸರಣಿಗೆ ಹೊಸದಾಗಿ ನಿರ್ಮಿಸಿದ ನಂದಿಗಿರಿದಾಮದ ಹೋಟೆಲ್ ಮಯೂರ ಪೈನ್ ಟಾಪ್ ನ ಆವರಣದಲ್ಲಿ ‘ಸನ್ರೈಸ್ ರೆಸ್ಟೋರೆಂಟ್’ ಅನ್ನು 22.07.2026 ರಂದು ಬೆಳಿಗ್ಗೆ 11.30 ಗಂಟೆಗೆ ಮಾನ್ಯ ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಕೆ.ಜೆ. ಜಾರ್ಜ್ ಅವರು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಎಂ. ಶ್ರೀನಿವಾಸ್, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಡಾ. ರಾಮ್ಪ್ರಸಾತ್ ಮನೋಹರ್, ಭಾ.ಆ.ಸೇ, ಪ್ರವಾಸೋದ್ಯಮ ಇಲಾಖೆಯ ಆಯುಕ್ತರು ಹಾಗೂ ಕೆಎಸ್ಟಿಡಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವಪ್ರಸಾದ್ ಪಿ.ಆರ್., ಭಾ.ಆ.ಸೇ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವರಾಮ್ ಬಾಬು ಎಂ. ಭಾ.ಅ.ಸೇ ಹಾಗೂ ಪ್ರವಾಸೋದ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಕೆ.ಎಸ್.ಟಿ.ಡಿ.ಸಿ ಮತ್ತು ಜೆ.ಎಲ್.ಆರ್. ಸಂಸ್ಥೆಯ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೊಸದಾಗಿ ನಂದಿಬೆಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿರುವ “ಸನ್ ರೈಸ್ ರೆಸ್ಟೋರೆಂಟ್” 2 ಮಹಡಿಗಳ ನಯನ ಮನೋಹರ ಆಕರ್ಷಕ ವಿನ್ಯಾಸ ಹೊಂದಿರುವ ರೆಸ್ಟೋರೆಂಟ್ ಆಗಿದೆ. 200 ಆಸನಗಳುಳ್ಳ ಈ ರೆಸ್ಟೋರೆಂಟ್ ಮಲ್ಟಿಕ್ಯುಸೀನ್ ರುಚಿಯಾದ ಮತ್ತು ಶುಚಿಯಾದ ಆಹಾರ ಮತ್ತು ಉಪಹಾರ ಗಳನ್ನು ಒದಗಿಸುವ ರೆಸ್ಟೋರೆಂಟ್ನ್ನಾಗಿ ನಿರ್ಮಿಸಲಾಗಿದೆ. ನಂದಿಬೆಟ್ಟಕ್ಕೆ ಪ್ರತಿದಿನ ಭೇಟಿ ನೀಡುವ ಪ್ರವಾಸಿಗರು ಪರಸ್ಪರ ಹರ್ಷೋಲ್ಲಾಸಗಳಿಂದ ಕಾಲಕಳೆಯಲು ವ್ಯವಸ್ಥಿತವಾದ ಸೌಲಭ್ಯವನ್ನು ಈಕಲ್ಪಿಸುತ್ತದೆ. ನಂದಿಗಿರಿಧಾಮವು ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಕನಿಷ್ಠ 7 ರಿಂದ 10 ಸಾವಿರಕ್ಕೂ ಹೆಚ್ಚಿನ ಹಾಗೂ ದೈನಂದಿನ ಸಾಮಾನ್ಯ ದಿನಗಳಲ್ಲಿ ಕನಿಷ್ಠ 2 ಸಾವಿರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನಂದಿ ಗಿರಿದಾಮದಲ್ಲಿ ವಿಶಿಷ್ಟವಾದ ಪಾರ್ಕಿಂಗ್ ಸೌಲಭ್ಯವನ್ನು ಕೆ.ಎಸ್.ಟಿ.ಡಿ.ಸಿ ವತಿಯಿಂದ ಒದಗಿಸಲಾಗುತ್ತಿದೆ.
“ಸನ್ ರೈಸ್ ರೆಸ್ಟೋರೆಂಟ್” ನ ಪ್ರಾರಂಭಿಸುವ ಮೂಲಕ ಪ್ರವಾಸಿಗರಿಗೆ ಗುಣಮಟ್ಟದ ಸೇವೆ ಮತ್ತು ಸೌಲಭ್ಯವನ್ನು ಒದಗಿಸಲು ಕೆ.ಎಸ್.ಟಿ.ಡಿ.ಸಿ ತನ್ನ ಬದ್ದತೆಯನ್ನು ಪ್ರದರ್ಶಿಸಿದೆ. ಈ ಮೂಲಕ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ.

