ಬೆಂಗಳೂರು: ಬೆಂಗಳೂರಿನಲ್ಲಿ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಪಾದಚಾರಿ ಮಾರ್ಗದಲ್ಲಿ ಮೋಟಾರು ವಾಹನ ಚಲಾಯಿಸುವವರಿಗೆ ವಿಧಿಸುವ ದಂಡದ ಮೊತ್ತವನ್ನು 5,000 ರೂ.ಗೆ ಹೆಚ್ಚಿಸುವಂತೆ ಸಾರಿಗೆ ಸಚಿವ ಬೈರತಿ ಸುರೇಶ್ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಸಾರ್ವಜನಿಕರ ನಡಿಗೆಯ ಹಕ್ಕನ್ನು ಖಚಿತಪಡಿಸಲು ಸುಪ್ರೀಂಕೋರ್ಟ್ ಸೂಚನೆಯ ಮೇರೆಗೆ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಂದ ತೆರವಾದ ಜಾಗದಲ್ಲಿ ಯಾವುದೇ ರೀತಿಯ ವಾಹನಗಳ ಓಡಾಟಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.
ಪಾದಚಾರಿ ಮಾರ್ಗದಲ್ಲಿ ವಾಹನಗಳ ಓಡಾಟದಿಂದ ಪಾದಚಾರಿಗಳ ಜೀವಕ್ಕೆ ಅಪಾಯ ಉಂಟಾಗುತ್ತದೆ. ಅಲ್ಲದೇ ದಿನದಿಂದ ದಿನಕ್ಕೆ ಪಾದಚಾರಿ ಮಾರ್ಗದಲ್ಲಿ ವಾಹನ ಓಡಾಟ ಹೆಚ್ಚಾಗುತ್ತಿದ್ದು, ಸಂಚಾರ ಪೊಲೀಸರು ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿದರೆ ಈಗ ಇರುವ ದಂಡದ ಮೊತ್ತವನ್ನು 500 ರೂ.ನಿಂದ 5000 ರೂ.ಗೆ ಹೆಚ್ಚಿಸುವಂತೆ ಸಾರಿಗೆ ಸಚಿವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.

