ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾವನ್ನು 1-0 ಅಂತರದಿಂದ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ಸ್ಪೇನ್ ತಂಡದ ಸಂಭ್ರಮಾಚರಣೆಯ ವೇಳೆ ಒಂದು ಅದ್ಭುತ ಘಟನೆ ನಡೆದಿದೆ. ಮೈದಾನದಲ್ಲಿ ತಮ್ಮ ಆಟದ ಮೂಲಕ ಗಮನಸೆಳೆದಿದ್ದ ಸ್ಪೇನ್‌ನ ಯುವ ವಿಂಗರ್ ಲಮಿನ್ ಯಮಾಲ್, ಮೈದಾನದ ಹೊರಗೂ ತಮ್ಮ ಸರಳತೆಯಿಂದ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದಾರೆ.
ವಿಶ್ವಕಪ್ ಗಿಟ್ಟಿಸಿಕೊಂಡ ಖುಷಿಯಲ್ಲಿದ್ದ ಯಮಾಲ್ ಅವರನ್ನು ಭೇಟಿಯಾಗಲು ಪುಟ್ಟ ಬಾಲಕಿ ಅಭಿಮಾನಿಯೊಬ್ಬಳು ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಓಡಿ ಬಂದಿದ್ದಳು. ಆದರೆ ಭದ್ರತಾ ಸಿಬ್ಬಂದಿ ತಕ್ಷಣವೇ ಆಕೆಯನ್ನು ತಡೆದು ದೂರ ಕರೆದೊಯ್ಯಲುತ್ನಿಸಿದರು. ಇದನ್ನು ತಕ್ಷಣವೇ ಗಮನಿಸಿದ ಯಮಾಲ್, ಸಂಭ್ರಮಾಚರಣೆಯನ್ನು ಬದಿಗೊತ್ತಿ ಭದ್ರತಾ ಸಿಬ್ಬಂದಿಗೆ ಬಾಲಕಿಯನ್ನು ತಮ್ಮ ಬಳಿ ಬರಲು ಬಿಡುವಂತೆ ಮನವಿ ಮಾಡಿದರು.
ಬಾಲಕಿ ಹತ್ತಿರ ಬರುತ್ತಿದ್ದಂತೆ ಪ್ರೀತಿಯಿಂದ ಮಾತನಾಡಿಸಿದ ಯಮಾಲ್, ಆಕೆಯೊಂದಿಗೆ ಫೋಟೋಗೆ ಪೋಸ್ ನೀಡಿದ್ದಲ್ಲದೆ ಆಟೋಗ್ರಾಫ್ ನೀಡಿ ಖುಷಿಪಡಿಸಿದರು. ಯುವ ತಾರೆಯ ಈ ಮಾನವೀಯ ಹಾಗೂ ಸರಳ ನಡವಳಿಕೆಗೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ಈ ಭಾವನಾತ್ಮಕ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಕ್ರೀಡಾಭಿಮಾನಿಗಳು ಯಮಾಲ್ ಅವರ ಕ್ರೀಡಾ ಸ್ಪೂರ್ತಿ ಮತ್ತು ನಡವಳಿಕೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಕೇವಲ ಶ್ರೇಷ್ಠ ಆಟಗಾರನಾಗುವುದಷ್ಟೇ ಅಲ್ಲದೆ, ಅಭಿಮಾನಿಗಳ ಪ್ರೀತಿಗೆ ಗೌರವ ನೀಡುವುದು ಹೇಗೆ ಎಂಬುದಕ್ಕೆ ಯಮಾಲ್ ಮಾದರಿಯಾಗಿದ್ದಾರೆ ಎಂದು ಕ್ರೀಡಾ ಲೋಕ ಕೊಂಡಾಡಿದೆ.

