ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಸೋಶಿಯಲ್ ಮೀಡಿಯಾ ಎನ್ನುವುದು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ನಂತಹ ವೇದಿಕೆಗಳಲ್ಲಿ ಕಂಟೆಂಟ್ ಕ್ರಿಯೇಟ್ ಮಾಡಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿರುವ ಸಾವಿರಾರು ಯುವಕರಿದ್ದಾರೆ. ಆದರೆ, ಉತ್ತಮ ಕಂಟೆಂಟ್ ತಯಾರಿಸಿದ ತಕ್ಷಣ ವಿಡಿಯೋ ವೈರಲ್ ಆಗಿಬಿಡುತ್ತದೆಯೇ? ಖಂಡಿತ ಇಲ್ಲ. ಅದರ ಹಿಂದೆ ಸೂಕ್ತ ತಂತ್ರಗಾರಿಕೆ ಹಾಗೂ ಸರಿಯಾದ ಸಮಯದ ಯೋಜನೆ ಇರುತ್ತದೆ.
ನಿಮಗೆ ಮನಸ್ಸು ಬಂದಾಗ ಅಥವಾ ಸಮಯ ಸಿಕ್ಕಾಗ ರೀಲ್ಸ್ ಅಪ್ಲೋಡ್ ಮಾಡಿದರೆ ವೀಕ್ಷಣೆ ಸಿಗುವುದಿಲ್ಲ. ಬದಲಾಗಿ ನಿಮ್ಮ ಓದುಗರು ಅಥವಾ ಫಾಲೋವರ್ಸ್ ಯಾವಾಗ ಆನ್‌ಲೈನ್‌ನಲ್ಲಿ ಸಕ್ರಿಯವಾಗಿರುತ್ತಾರೆ, ಯಾವ ಸಮಯದಲ್ಲಿ ಹೆಚ್ಚು ಮೊಬೈಲ್ ಸ್ಕ್ರೋಲ್ ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡು ವಿಡಿಯೋ ಅಪ್ಲೋಡ್ ಮಾಡುವುದು ಅತ್ಯಂತ ಮುಖ್ಯ.
ಸರಿಯಾದ ಸಮಯದಲ್ಲಿ ಪೋಸ್ಟ್ ಮಾಡುವುದು ಏಕೆ ಮುಖ್ಯ?
ಇನ್‌ಸ್ಟಾಗ್ರಾಮ್ ಅಲ್ಗಾರಿದಮ್ ಕಾರ್ಯನಿರ್ವಹಿಸುವುದೇ ಎಂಗೇಜ್‌ಮೆಂಟ್ ಆಧಾರದ ಮೇಲೆ. ನೀವು ವಿಡಿಯೋ ಪೋಸ್ಟ್ ಮಾಡಿದ ಮೊದಲ 1-2 ಗಂಟೆಗಳಲ್ಲಿ ಎಷ್ಟು ಲೈಕ್ಸ್, ಕಮೆಂಟ್ ಮತ್ತು ಶೇರ್‌ಗಳು ಬರುತ್ತವೆ ಎಂಬುದನ್ನು ಆಧರಿಸಿ ಅಲ್ಗಾರಿದಮ್ ಆ ವಿಡಿಯೋವನ್ನು ಮತ್ತಷ್ಟು ಜನರ ಫೀಡ್ ಅಥವಾ ಎಕ್ಸ್‌ಪ್ಲೋರ್ ಪೇಜ್ಗೆ ತಳ್ಳುತ್ತದೆ. ಹೀಗಾಗಿ ಸೂಕ್ತ ಸಮಯದಲ್ಲಿ ಪೋಸ್ಟ್ ಮಾಡಿದರೆ ತಕ್ಷಣವೇ ಲಕ್ಷಾಂತರ ವೀಕ್ಷಣೆ ಹಾಗೂ ಹೊಸ ಫಾಲೋವರ್ಸ್ ಪಡೆಯಲು ಸಾಧ್ಯ.
ಇನ್‌ಸ್ಟಾಗ್ರಾಮ್ ರೀಲ್ಸ್ ಅಪ್ಲೋಡ್ ಮಾಡಲು ಇಲ್ಲಿದೆ ಬೆಸ್ಟ್ ಟೈಮಿಂಗ್ಸ್:
ಸೋಶಿಯಲ್ ಮೀಡಿಯಾ ತಜ್ಞರ ವಿಶ್ಲೇಷಣೆಯ ಪ್ರಕಾರ, ಭಾರತೀಯ ಬಳಕೆದಾರರನ್ನು ತಲುಪಲು ದಿನದ ಈ 4 ಪ್ರಮುಖ ಸಮಯಗಳು ಅತ್ಯಂತ ಸೂಕ್ತವಾಗಿವೆ:
ಬೆಳಿಗ್ಗೆ 6:00 ರಿಂದ 9:00 ರವರೆಗೆ
ಇದು ದಿನದ ಆರಂಭದ ಸಮಯ. ಜನರು ಎಚ್ಚರಗೊಳ್ಳುತ್ತಿದ್ದಂತೆ ಅಥವಾ ಬೆಳಗಿನ ಟೀ ಕುಡಿಯುತ್ತಾ, ಪ್ರಯಾಣದ ವೇಳೆಯಲ್ಲಿ ಮೊಬೈಲ್ ತೆರೆದು ನೋಟಿಫಿಕೇಶನ್‌ಗಳು, ನ್ಯೂಸ್ ಹಾಗೂ ಸೋಶಿಯಲ್ ಮೀಡಿಯಾ ನೋಡುವುದು ಸಹಜ. ಈ ಸಮಯದಲ್ಲಿ ರೀಲ್ಸ್ ಹಾಕಿದರೆ ಬೆಳಗಿನ ದಿನಚರಿ ಆರಂಭಿಸುವವರ ಗಮನ ಸೆಳೆಯಬಹುದು.
ಮಧ್ಯಾಹ್ನ 12:00 ರಿಂದ 1:30 ರವರೆಗೆ
ಇದು ಆಫೀಸ್ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಊಟದ ವಿರಾಮದ ಸಮಯ. ಕೆಲಸದ ಒತ್ತಡದ ನಡುವೆ ವಿಶ್ರಾಂತಿ ಪಡೆಯುತ್ತಾ ಹೆಚ್ಚಿನವರು ಮೊಬೈಲ್ ಸ್ಕ್ರೋಲ್ ಮಾಡುತ್ತಿರುತ್ತಾರೆ. ಈ ವೇಳೆಯಲ್ಲಿ ಪೋಸ್ಟ್ ಮಾಡುವ ಕಂಟೆಂಟ್‌ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತದೆ.
ಮಧ್ಯಾಹ್ನ 3:00 ರಿಂದ ಸಂಜೆ 6:00 ರವರೆಗೆ
ಇದು ಕೆಲಸ ಅಥವಾ ಓದಿನ ಮಧ್ಯಂತರದ ಬ್ರೇಕ್ ಹಾಗೂ ಮನೆಗೆ ತೆರಳುವ ಸಮಯ. ಜನರು ಮಾನಸಿಕವಾಗಿ ಕೊಂಚ ಹಗುರವಾಗಿರುತ್ತಾರೆ ಮತ್ತು ರೀಲ್ಸ್ ವೀಕ್ಷಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ.
ರಾತ್ರಿ 9:00 ರಿಂದ 12:00 ರವರೆಗೆ
ಇದು ಇಡೀ ದಿನದ ಅತಿ ಹೆಚ್ಚು ಎಂಗೇಜ್‌ಮೆಂಟ್ ಸಿಗುವ ‘ಪ್ರೈಮ್ ಟೈಮ್’. ಇಡೀ ದಿನದ ಕೆಲಸ ಮುಗಿಸಿ ಪ್ರತಿಯೊಬ್ಬರೂ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಾ, ಬೆಡ್‌ಗೆ ಹೋಗುವ ಮುನ್ನ ಸುಮ್ಮನೆ ರೀಲ್ಸ್ ಸ್ಕ್ರೋಲ್ ಮಾಡುವ ಸಮಯ. ಈ ಸಮಯದಲ್ಲಿ ಅಪ್ಲೋಡ್ ಆಗುವ ವಿಡಿಯೋಗಳು ರಾತ್ರೋರಾತ್ರಿ ವೈರಲ್ ಆಗುವ ಸಾಧ್ಯತೆ ಶೇ. 80 ರಷ್ಟು ಹೆಚ್ಚಿರುತ್ತದೆ.
ಕೇವಲ ಟೈಮಿಂಗ್ಸ್ ಅಷ್ಟೇ ಅಲ್ಲ, ನಿಮ್ಮ ವಿಡಿಯೋದ ಕ್ವಾಲಿಟಿ, ಮೊದಲೆರಡು ಸೆಕೆಂಡ್‌ಗಳಲ್ಲಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಹುಕ್ ಮತ್ತು ಕಂಟೆಂಟ್‌ನಲ್ಲಿರುವ ವಿಷಯ ಬಹುಮುಖ್ಯ. ಈ ಮೇಲಿನ ಸಮಯಗಳನ್ನು ನೆನಪಿನಲ್ಲಿಟ್ಟುಕೊಂಡು ನಿಯಮಿತವಾಗಿ ಕಂಟೆಂಟ್ ಪೋಸ್ಟ್ ಮಾಡುತ್ತಾ ಬಂದರೆ, ನಿಮ್ಮ ಇನ್‌ಸ್ಟಾಗ್ರಾಮ್ ಪೇಜ್ ವೇಗವಾಗಿ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

