ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅನಾರೋಗ್ಯದಿಂದ ನಿನ್ನೆ ವಿಧಿವಶರಾಗಿದ್ದು, ಅವರ ಅಂತ್ಯಕ್ರಿಯೆ ನಾಳೆ ಸೋಮವಾರ ಹಾಸನದ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆಯಲಿದೆ.
ದೇವೇಗೌಡರ ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಇಂದು ಬೆಳಿಗ್ಗೆಯಿಂದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರಿಂದ ಅಂತಿಮ ದರ್ಶನದ ಬಳಿಕ ಹೆಚ್.ಡಿ,.ದೇವೇಗೌಡರು ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದರು. ಬಳಿಕ ಮುತ್ತೈದೆಯಾಗಿ ಇಹಲೋಕ ತ್ಯಜಿಸಿರುವ ಪತ್ನಿಗೆ ಅರಿಷಿಣ-ಕುಂಕುಮವಿಟ್ಟು, ಹೂ ಮುಡಿಸಿ ಅಂತಿಮ ವಿಧಿ-ವಿಧಾನ ನೆರವೇರಿಸಿದರು. ಅಗಲಿದ ಪತ್ನಿಯ ನೋವಿನಲ್ಲಿ ಶೈತ್ಯಾಗಾರದ ಮೇಲೆ ತಲೆಯಿಟ್ಟು ದೇವೇಗೌಡರು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.
ಕುಟುಂಬ ಸದಸ್ಯರಿಂದ ಚೆನ್ನಮ್ಮ ಅಂತಿಮ ದರ್ಶನದ ಬಳಿಕ ಪಾರ್ಥೀವಶರೀರದ ಮೇಲೆ ರಾಷ್ಟ್ರಧ್ವಜ ಹೊದಿಸಿ ಗೌರವ ನಮನ ಸಲ್ಲಿಸಲಾಯಿತು. ಬೆಂಗಳೂರಿನಿಂದ ಹಾಸನ ಜಿಲ್ಲೆಯ ಹೊಳೆನರಸೀಪುರವರೆಗೆ ಚೆನ್ನಮ್ಮ ಅಂತಿಮ ಯಾತ್ರೆ ಆರಂಭವಾಯಿತು. ಬೆಂಗಳೂರಿನಿಂದ ನೆಲಮಂಗಲ ಕ್ರಾಸ್, ಸೋಲೂರು ಕ್ರಾಸ್, ಮರೂರು ಹ್ಯಾಂಡ್ ಪೋಸ್ಟ್, ಕುಣಿಗಲ್ ಕ್ರಾಸ್, ಬೆಳ್ಳೂರು ಕ್ರಾಸ್, ಕದಬಳ್ಳಿ ಕ್ರಾಸ್, ಹಿರಿಸಾವೆ, ಚನ್ನರಾಯಪಟ್ಟಣ, ಎಲೆಯೂರು, ಹಾಸನ ಡೈರಿ ಸರ್ಕಲ್, ಭೂನಳ್ಳಿ ಕ್ರಾಸ್, ಶಾಂತಿ ಗ್ರಾಮ, N.R.ಸರ್ಕಲ್ ಮೂಲಕ ಮೊಸಳೆ ಹೊಸಳ್ಳಿಗೆ ಪಾರ್ಥೀವಶರೀರ ತಲುಪಲಿದೆ.
ಹೊಳೆನರಸೀಪುರದ ರೇವಣ್ಣ ನಿವಾಸದಲ್ಲಿ ನಾಳೆ ಬೆಳಗ್ಗೆ 7 ರಿಂದ 9.30ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 10 ಗಂಟೆಗೆ ಹೊಳೆನರಸೀಪುರದಿಂದ ಪಾರ್ಥಿವ ಶರೀರ ರವಾನೆಯಾಗಲಿದೆ. ಬೆಳಗ್ಗೆ 11.30ಕ್ಕೆ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

