ಬೆಂಗಳೂರು: ನಾಳೆ ಭಾನುವಾರ ರಜಾ ದಿನವಾಗಿದ್ದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟ ಸಭೆ ಕರೆದಿದ್ದಾರೆ. ನಾಳೆ ತುರ್ತು ಸಚಿವ ಸಂಪುಟ ಸಭೆ ಕರೆದಿರುವುದಾಗಿ ಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಗುರುವಾರವೇ ಸಚಿವ ಸಂಪುಟ ಸಭೆ ಮಾಡಬೇಕಿತ್ತು. ದೆಹಲಿಗೆ ಹೋಗಿದ್ದರಿಂದ ಸಂಪುಟ ಸಭೆ ನಡೆಸಲು ಸಾಧ್ಯವಾಗಿಲ್ಲ. ನಾವು ಬರಗಾಲದ ಬಗ್ಗೆ ಚರ್ಚೆ ನಡೆಸಬೇಕು. ಹಾಗಾಗಿ ನಾಳೆ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದೇನೆ ಎಂದರು.
ನಾಳೆ ಜಿಲ್ಲಾಧಿಕಾರಿಗಳು, ಸಿಇಒಗಳ ಜೊತೆ ಸಭೆ ಇಟ್ಟುಕೊಂಡಿದ್ದೇವೆ. ಬರ ಪರಿಸ್ಥಿತಿ, ಕುಡಿಯುವ ನೀರು ವಿಚಾರ ಸೇರಿದಂತೆ ಹಲವು ವಿಷಗಳನ್ನು ಚರ್ಚಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಮಂಡ್ಯ ಭಾಗದ ರೈತರೇ ಆಗಲಿ ಯಾರೇ ಆಗಲಿ ನೀರನ್ನು ಕುಡಿಯುವ ನೀರಿಗೆ ಮಾತ್ರ ಉಪಯೋಗಿಸಬೇಕು. ಕೃಷಿ ಚಟುವಟಿಕೆಗಳಿಗೆ ಸದ್ಯಕ್ಕೆ ಉಪಯೋಗಿಸುವಂತಿಲ್ಲ. ಬಿತ್ತನೆ ಮಾಡಿ ವ್ಯವಸಾಯಕ್ಕೆ ನೀರು ಬಳಸಿ ಆಮೇಲೆ ನೀರು ಬಿಡುವಂತೆ ನಮ್ಮ ಮೇಲೆ ಒತ್ತಡ ಹೇರುವಂತಿಲ್ಲ. ಇದಕ್ಕೆ ಅವಕಾಶ ಕೊಡದಂತೆ ಅಧಿಕಾರಿಗಳಿಗೂ ಸೂಚಿಸಲಾಗಿದೆ ಎಂದರು.

