ಬೆಂಗಳೂರು: ಅಪಘಾತದಲ್ಲಿ ಪುತ್ರನನ್ನು ಕಳೆದುಕೊಂಡ ಪೋಷಕರು ದುಃಖದ ನಡುವೆಯೂ ತಮ್ಮ ಮಗನ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರಿನ ರಾಜಾಜಿನಗರ ನಿವಾಸಿ ಸಂಜನ್(19) ಮೃತಪಟ್ಟ ಯುವಕ. ಉದ್ಯಮಿ ಲೋಕೇಶ್ ಮತ್ತು ಶ್ವೇತಾ ದಂಪತಿಯ ಏಕೈಕ ಪುತ್ರನಾಗಿದ್ದ ಸಂಜನ್ ಶ್ರೀ ಮುರುಗನ್ ದೇವಾಲಯಕ್ಕೆ ಕಾರ್ ನಲ್ಲಿ ತೆರಳಿ ವಾಪಸ್ ಬರುವಾಗ ತಮಿಳುನಾಡಿನ ರಾಯಕೋಟೆ ಸಮೀಪ ಲಾರಿಗೆ ಕಾರ್ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದ.
ನಂತರ ಪೋಷಕರು ಪುತ್ರನ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ. ಸಂಜನ್ ಅವರ ಕಣ್ಣು, ಹೃದಯ, ಶ್ವಾಸಕೋಶ, ಲಿವರ್ ಹಾಗೂ ಕಿಡ್ನಿಗಳನ್ನು ದಾನ ಮಾಡಲಾಗಿದೆ. ಈ ಅಂಗಾಂಗ ದಾನದ ಮೂಲಕ ಏಳೆಂಟು ಜನರಿಗೆ ಹೊಸ ಬದುಕು ನೀಡಲಾಗಿದೆ. ಅಪಘಾತದಲ್ಲಿ ಪುತ್ರನ ಕಳೆದುಕೊಂಡ ನೋವಿನಲ್ಲಿಯೂ ಪೋಷಕರು ಸಾರ್ಥಕತೆ ಮೆರೆದು ಮಾದರಿಯಾಗಿದ್ದಾರೆ.

