ಬೆಂಗಳೂರು: ರಾಜ್ಯಾದ್ಯಂತ 579 ಮದ್ಯದ ಸನ್ನದುಗಳ ಹಂಚಿಕೆಗೆ ಇ-ಹರಾಜು ಕೈಗೊಳ್ಳಲಾಗಿದ್ದು, ಜುಲೈ 24 ರಿಂದ 31ರವರೆಗೆ ಮದ್ಯದ ಸನ್ನದು ನೇರ ಹರಾಜು ಪ್ರಕ್ರಿಯೆ ನಡೆಯಲಿದೆ.
ಒಟ್ಟು 579 ಮದ್ಯದ ಸನ್ನದುಗಳನ್ನು ಹರಾಜು ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಐದು ವರ್ಷಗಳ ಅವಧಿಗೆ ಹಂಚಿಕೆಗೆ ಇ-ಹರಾಜು ಪ್ರಕ್ರಿಯೆ ನಡೆಸಲಾಗುವುದು. ಇ-ಹರಾಜು ಮೂಲಕ ಹಂಚಿಕೆ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಜುಲೈ 3ರಿಂದಲೇ ಬಿಡ್ ದಾರರ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಜುಲೈ 31ರವರೆಗೆ ವಿವಿಧ ಹಂತಗಳಲ್ಲಿ ನೇರ ಹರಾಜು ನಡೆಯಲಿದೆ.
ಈ ಇ-ಹರಾಜು ಪ್ರಕ್ರಿಯೆಯು ಅಧಿಕೃತ ವೆಬ್ಸೈಟ್ ಆದ https://www.mstcecommerce.com ಮೂಲಕ ನಡೆಯಲಿದ್ದು, ಹರಾಜು ನಡೆಯುವ ಮತ್ತು ಅಂಗೀಕಾರ ಪತ್ರ ನೀಡುವ ವರ್ಷವನ್ನು ಒಳಗೊಂಡಂತೆ ಒಟ್ಟು ಐದು ಅಬಕಾರಿ ವರ್ಷಗಳ ಅವಧಿಗೆ ಅಂದರೆ 2026-27 ರಿಂದ 2030-31 ರವರೆಗೆ ಸನ್ಮದುಗಳನ್ನು ನೀಡಲಾಗುವುದು.
ಈ ಇ-ಹರಾಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನಿಯಮಾನುಸಾರ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಅದರಂತೆ ಪರಿಶಿಷ್ಟ ಜಾತಿ-ಎ ಗೆ ಶೇ 5.25, ಬಿ ಗೆ ಶೇ 5.25, ಸಿ ಗೆ ಶೇ 4.5 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 3 ರಷ್ಟು ಮೀಸಲಾತಿ ಇರಲಿದೆ. ಜುಲೈ 24 ರಿಂದ 31ರವರೆಗೆ ನೇರ ಇ-ಹರಾಜು ಪ್ರಕ್ರಿಯೆ ನಡೆಸಲಾಗುವುದು ಎನ್ನಲಾಗಿದೆ.

