ಬೆಳಗಾವಿ: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಮಂಗಳವಾರ ವಿದ್ಯುತ್ ಸ್ಪರ್ಶಿಸಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೊಲದಲ್ಲಿ ಎಂದಿನಂತೆ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದ ದಂಪತಿಗೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾರೆ. ನಾಗನೂರ ಗ್ರಾಮದ ಮುತ್ತಪ್ಪ ಶ್ರೀಶೈಲ ಮುಗಳಖೋಡ(46) ಮತ್ತು ರಾಜಶ್ರೀ ಮುಗಳಖೋಡ(36) ಮೃತಪಟ್ಟ ದಂಪತಿ. ತಮ್ಮದೇ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುವಾಗ ಕೆಳಗೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಮೂಡಲಗಿ ಠಾಣೆಯ ಪೊಲೀಸರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಪತಿ ಒಟ್ಟಿಗೆ ಮೃತಪಟ್ಟಿರುವುದನ್ನು ಕಂಡು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ನಾಗನೂರು ಗ್ರಾಮದಲ್ಲಿ ಶೋಕದ ವಾತಾವರಣ ಉಂಟಾಗಿದೆ.

