HomeKarnatakaಘಾಟ್ ಪ್ರದೇಶಗಳಲ್ಲಿ ಸಂಚಾರ ಸುರಕ್ಷತೆಗೆ ಆದ್ಯತೆ: ಹುಲಿಕಲ್ ಘಾಟ್‌ ನಲ್ಲಿ ಕಾಮಗಾರಿ ಪರಿಶೀಲಿಸಿದ ಸಚಿವ ಸತೀಶ್...

ಘಾಟ್ ಪ್ರದೇಶಗಳಲ್ಲಿ ಸಂಚಾರ ಸುರಕ್ಷತೆಗೆ ಆದ್ಯತೆ: ಹುಲಿಕಲ್ ಘಾಟ್‌ ನಲ್ಲಿ ಕಾಮಗಾರಿ ಪರಿಶೀಲಿಸಿದ ಸಚಿವ ಸತೀಶ್ ಜಾರಕಿಹೊಳಿ

ಶಿವಮೊಗ್ಗ: ಹುಲಿಕಲ್ ಘಾಟ್ ನಲ್ಲಿ ರೂ. 4.35 ಕೋಟಿ ಮತ್ತು ರೂ. 1 ಕೋಟಿ ವೆಚ್ಚದಲ್ಲಿ ತಡೆಗೋಡೆ ಮತ್ತು ಇತರೆ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ತ್ವರಿತ ಮತ್ತು ಗುಣಮಟ್ಟದಿಂದ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ‌ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಅವರು ಮಂಗಳವಾರ ಸಂಜೆ ಹುಲಿಕಲ್ ಘಾಟ್ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿ ಪ್ರಗತಿಯಲ್ಲಿರುವ ರಿಟೇನಿಂಗ್ ವಾಲ್ ರಕ್ಷಣಾ ಗೋಡೆ) ನಿರ್ಮಾಣ ಹಾಗೂ ಇತರೆ ರಸ್ತೆ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಿ ಪರಿಶೀಲನೆ ನಡೆಸಿ, ಮಾತನಾಡಿದರು.

ಘಾಟಿಯಲ್ಲಿ ಭಾರೀ ಪ್ರಮಾಣದ ವಾಹನ ಬಿಟ್ಟು ಬೇರೆ ಲಘು ವಾಹನಗಳ ಪ್ರಯಾಣಕ್ಕೆ ಈಗಾಗಲೇ ಅವಕಾಶ ಮಾಡಿಕೊಡಲಾಗಿದೆ. ಇಲಾಖೆಯಡಿ ಸ್ಥಗಿತಗೊಂಡ ಕಾಮಗಾರಿಗಳಿಗೆ ಚಾಲನೆ ನೀಡಲು ಸೂಚಿಸಿದ್ದೇನೆ. ಶಿವಮೊಗ್ಗದ ತುಂಗಾ ಸೇತುವೆ ನಿರ್ಮಾಣಕ್ಕೆ ರೂ. ೫೦ ಕೋಟಿ ಮಂಜೂರಾಗಿದ್ದು, ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಸದರಿ ಕಾಮಗಾರಿ ಆರಂಭಿಸಲಾಗುವುದು. ಮಳೆಗಾಲದ ಹಿನ್ನೆಲೆಯಲ್ಲಿ ಘಾಟ್ ಪ್ರದೇಶದಲ್ಲಿ ಭೂಕುಸಿತವಾಗದಂತೆ ತಡೆಯಲು ಮತ್ತು ವಾಹನ ಸವಾರರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಚಿವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಸಚಿವರು, ಅಲ್ಲಿದ್ದ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ಘಾಟ್ ರಸ್ತೆಗಳು ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿದ್ದರಿಂದ, ರಿಟೇನಿಂಗ್ ವಾಲ್ ನಿರ್ಮಾಣದಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದ ಕೊರತೆಯಾಗಬಾರದು ಎಂದು ಸೂಚನೆ ನೀಡಿದರು.

ಮಳೆಗಾಲದಲ್ಲಿ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ಯಾವುದೇ ವ್ಯತ್ಯಯ ಉಂಟಾಗದಂತೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಸುರಕ್ಷತಾ ಕ್ರಮಗಳು: ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಫಲಕಗಳು ಹಾಗೂ ರಾತ್ರಿ ವೇಳೆಯಲ್ಲಿ ವಾಹನ ಸವಾರರಿಗೆ ಕಾಣಿಸುವಂತಹ  ಸೂಚಕಗಳನ್ನು ಅಳವಡಿಸಬೇಕು. “ಘಾಟ್ ಪ್ರದೇಶಗಳಲ್ಲಿ ಸಂಚಾರ ಸುರಕ್ಷತೆ ನಮಗೆ ಅತ್ಯಂತ ಪ್ರಮುಖವಾಗಿದೆ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಮತ್ತು ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ತಿಳಿಸಿದರು.

ಇದೇ ವೇಳೆ ಸಚಿವರು ಬಾಳೆಬರೆ ಫಾಲ್ಸ್ ಗೆ ಭೇಟಿ ನೀಡಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಗಣೇಶ್, ಅಧೀಕ್ಷಕ ಅಭಿಯಂತರ ರಾದ ರಮ್ಯ ಕಾರ್ಯಪಾಲಕ ಇಂಜಿನಿಯರ್ ಸುನಿಲ್ ಕುಮಾರ್ ಮತ್ತು ಪ್ರಕಾಶ್, ಹೊಸನಗರ ತಹಶೀಲ್ದಾರ್, ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಹೊಸನಗರ ಶಾಲೆಗೆ ಸಚಿವರಾದ ಸತೀಶ್ ಜಾರಕಿಹೂಳಿ ದಿಢೀರ್ ಭೇಟಿ:

ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಹೊಸನಗರದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಗೆ ದಿಢೀರ್ ಭೇಟಿ ನೀಡಿ ಶಾಲೆಯ ಸ್ಥಿತಿಗತಿಯನ್ನು ಪರಿಶೀಲಿಸಿದರು.

ಹೊಸನಗರ ಮಾರ್ಗದಲ್ಲಿ ಹುಲಿಕಲ್ ಘಾಟ್ ಕಾಮಗಾರಿ ವಿಕ್ಷಣೆಗೆ ಹೊರಡುತ್ತಿದ್ದ ವೇಳೆಯಲ್ಲಿ ಮಾರ್ಗಮಧ್ಯದಲ್ಲಿ ದಿಢೀರ್ ಶಾಲೆಗೆ ಭೇಟಿ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸ್ಥಳೀಯ ನಾಯಕರೊಂದಿಗೆ ಚರ್ಚಿಸಿದರು. ಈ ವೇಳೆ ಮುಖ್ಯ ಶಿಕ್ಷಕರು ಶಾಲೆ ಮಕ್ಕಳ ಕ್ರೀಡಾ ಸಾಧನೆ ಬಗ್ಗೆ ವಿವರಿಸಿದಾಗ,  ಸಚಿವರು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದಿಂದ ಬೃಹತ್ ಮಟ್ಟದಲ್ಲಿ ಭಾರತ್ ಜೋಡೋ ಕ್ರೀಡಾ ಕೂಟ ಆಯೋಜನೆ ಮಾಡಲಾಗುತ್ತಿದ್ದು, ಈ ಕ್ರೀಡಕೂಟದ ಸದುಪಯೋಗವನ್ನು ಕ್ರೀಡೆಯಲ್ಲಿ ಸಾಧನೆ ಮಾಡಿರುವ ನಿಮ್ಮ ಶಾಲೆಯ ಮಕ್ಕಳಿಗೆ ಪಡೆದುಕೊಳ್ಳುವಂತೆ ತಿಳಿಸಿದರು.

ಪ್ರಾಂಶುಪಾಲರು ಸರ್ಕಾರಿ ಶಾಲೆ ಅಭಿವೃದ್ದಿ ಹೊಂದುಬೇಕಾಗಿದೆ. ಮೂಲಭೂತ ಸೌಕರ್ಯ ಕೊರತೆಯಿದೆ ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular