ನವದೆಹಲಿ: ಮೊದಲ ಪತಿ ಜೀವಂತವಾಗಿದ್ದು, ಕಾನೂನುಬದ್ಧವಾಗಿ ವಿಚ್ಛೇದನ ಪಡೆಯದೇ ಮತ್ತೊಬ್ಬ ವ್ಯಕ್ತಿಯನ್ನು ವಿವಾಹವಾದ ಮಹಿಳೆಗೆ ಎರಡನೇ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಂತಹ ವಿವಾಹಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಹೀಗಾಗಿ ಮಹಿಳೆಯನ್ನು ಕಾನೂನುಬದ್ಧ ಪತ್ನಿ ಎಂದು ಪರಿಗಣಿಸಲಾಗುವುದಿಲ್ಲ ಹಾಗೂ ಎರಡನೇ ಪತಿಯಿಂದ ಭರಣೆ ಕೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ನ್ಯಾಯಮೂರ್ತಿ ಅಚಲ್ ಸಚ್ದೇವ್ ಅವರ ಏಕಸದಸ್ಯ ಪೀಠ ಈ ಕುರಿತು ತೀರ್ಪು ನೀಡಿದ್ದು, ಕುಟುಂಬ ನ್ಯಾಯಾಲಯ ನೀಡಿದ್ದ ಹಿಂದಿನ ಆದೇಶವನ್ನು ರದ್ದುಪಡಿಸಿದೆ.
ಪ್ರಕರಣವೇನು ?
ನ್ಯಾಯಾಲಯದ ದಾಖಲೆಗಳ ಪ್ರಕಾರ, ಉತ್ತರ ಪ್ರದೇಶದ ಮಹಿಳೆಯೊಬ್ಬರು 2006ರ ಜೂನ್ 10ರಂದು ಹಿಂದೂ ಸಂಪ್ರದಾಯದಂತೆ ಸಂತೋಷ್ ಕುಮಾರ್ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದರು. ಆದರೆ ಆ ವೇಳೆ ಅವರು ತಮ್ಮ ಮೊದಲ ಪತಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡಿರಲಿಲ್ಲ.
ನಂತರ ಸಂತೋಷ್ ಕುಮಾರ್ ಮತ್ತು ಮಹಿಳೆ ದಂಪತಿಗಳಾಗಿ ವಾಸವಿದ್ದು, ಅವರಿಗೆ ಒಬ್ಬ ಪುತ್ರಿಯೂ ಜನಿಸಿದ್ದಾಳೆ. ಕೆಲ ವರ್ಷಗಳ ಬಳಿಕ ಸಂತೋಷ್ ಕುಮಾರ್ ತಮ್ಮನ್ನು ಮತ್ತು ಮಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಹಾಗೂ ತಿಂಗಳಿಗೆ ₹18,000 ರಿಂದ ₹20,000 ಆದಾಯ ಇದ್ದರೂ ಯಾವುದೇ ಖರ್ಚು ನೀಡುತ್ತಿಲ್ಲ ಎಂದು ಆರೋಪಿಸಿ ಮಹಿಳೆ CrPC ಸೆಕ್ಷನ್ 125 ಅಡಿಯಲ್ಲಿ ಚಿತ್ರಕೂಟ್ ಕುಟುಂಬ ನ್ಯಾಯಾಲಯದಲ್ಲಿ ಭರಣೆ ಕೋರಿ ಅರ್ಜಿ ಸಲ್ಲಿಸಿದ್ದರು.
2025ರ ಆಗಸ್ಟ್ನಲ್ಲಿ ವಿಚಾರಣೆ ನಡೆಸಿದ ಕುಟುಂಬ ನ್ಯಾಯಾಲಯ, ಮಹಿಳೆಗೆ ತಿಂಗಳಿಗೆ ₹2,000 ಹಾಗೂ ಪುತ್ರಿಗೆ ₹1,000 ಜೀವನಾಂಶ ನೀಡುವಂತೆ ಸಂತೋಷ್ ಕುಮಾರ್ ಅವರಿಗೆ ಆದೇಶಿಸಿತ್ತು.
ಹೈಕೋರ್ಟ್ ಏನು ಹೇಳಿತು?
ಕುಟುಂಬ ನ್ಯಾಯಾಲಯದ ಆದೇಶವನ್ನು ಸಂತೋಷ್ ಕುಮಾರ್ ಅಲಹಾಬಾದ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಚಲ್ ಸಚ್ದೇವ್, ಮೊದಲ ಪತಿಗೆ ವಿಚ್ಛೇದನ ನೀಡದೇ ಎರಡನೇ ವ್ಯಕ್ತಿಯೊಂದಿಗೆ ದಾಂಪತ್ಯ ಜೀವನ ನಡೆಸಿದ್ದರಿಂದ ಮಹಿಳೆಯನ್ನು ಕಾನೂನುಬದ್ಧ ಪತ್ನಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.ಹೀಗಾಗಿ ಮಹಿಳೆಗೆ ಜೀವನಾಂಶ ನೀಡುವಂತೆ ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶ ಕಾನೂನುಬದ್ಧವಾಗಿಲ್ಲ ಎಂದು ಹೇಳಿ ಅದನ್ನು ರದ್ದುಪಡಿಸಿದರು.
ಮಗಳಿಗೆ ಜೀವನಾಂಶ ಮುಂದುವರಿಕೆ
ಆದರೆ ಡಿಎನ್ಎ ವರದಿಯ ಪ್ರಕಾರ, ಎಂಟು ವರ್ಷದ ಬಾಲಕಿಗೆ ಸಂತೋಷ್ ಕುಮಾರ್ ಅವರೇ ಜೈವಿಕ ತಂದೆ ಎಂಬುದು ಸಾಬೀತಾಗಿದೆ. ಆದ್ದರಿಂದ ತಂದೆಯಾಗಿ ಮಗಳ ಪೋಷಣೆಯ ಜವಾಬ್ದಾರಿ ಅವರ ಮೇಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಬಾಲಕಿಗೆ ತಿಂಗಳಿಗೆ ₹1,000 ಜೀವನಾಂಶ ನೀಡುವ ಕುಟುಂಬ ನ್ಯಾಯಾಲಯದ ಆದೇಶವನ್ನು ಯಥಾಸ್ಥಿತಿಯಲ್ಲಿ ಉಳಿಸಿತು.
CrPC ಸೆಕ್ಷನ್ 125 ಎಂದರೇನು?
ಭಾರತದಲ್ಲಿ CrPC ಸೆಕ್ಷನ್ 125 ಅಡಿಯಲ್ಲಿ ಪತ್ನಿ, ಮಕ್ಕಳು ಹಾಗೂ ವೃದ್ಧ ಪೋಷಕರಿಗೆ ಭರಣೆ ಪಡೆಯುವ ಹಕ್ಕು ನೀಡಲಾಗಿದೆ. ಈ ಕಾನೂನಿನ ಪ್ರಕಾರ, ಪತ್ನಿ ಕಾನೂನುಬದ್ಧವಾಗಿ ವಿವಾಹವಾಗಿರಬೇಕು. ಪತಿ ತನ್ನ ಅವಲಂಬಿತರನ್ನು ನಿರ್ಲಕ್ಷಿಸಿದರೆ ಅವರಿಗೆ ಮಾಸಿಕ ಜೀವನಾಂಶ ನೀಡಬೇಕಾಗುತ್ತದೆ.
ಆದರೆ ಕಾನೂನುಬದ್ಧ ಪತ್ನಿಯ ಸ್ಥಾನಮಾನ ಇಲ್ಲದಿದ್ದರೆ, ಅಥವಾ ಯಾವುದೇ ಸಮಂಜಸ ಕಾರಣವಿಲ್ಲದೆ ಪತಿಯಿಂದ ದೂರವಿದ್ದರೆ, ಅಥವಾ ಮತ್ತೊಬ್ಬರೊಂದಿಗೆ ಕಾನೂನುಬಾಹಿರ ಸಂಬಂಧ ಹೊಂದಿದ್ದರೆ, ಅಥವಾ ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟಿದ್ದರೆ, ಈ ಸೆಕ್ಷನ್ ಅಡಿಯಲ್ಲಿ ಮಹಿಳೆಗೆ ಜೀವನಾಂಶ ಪಡೆಯುವ ಹಕ್ಕು ಇರುವುದಿಲ್ಲ.

