ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಮಂಡಳಿಯ ಸಭೆ ಜುಲೈ 15ರ ಬುಧವಾರ ನಡೆಯಲಿದ್ದು, ಸಭೆಯ ನಂತರ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರು ಹರಿಸುವ ಬಗ್ಗೆ ನಿರ್ಧರಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕಬ್ಬು, ಭತ್ತದ ಬೆಳೆ ಒಣಗುತ್ತಿದ್ದು, ನಾಲೆಗಳಿಗೆ ನೀರು ಹರಿಸುವಂತೆ ರೈತರಿಂದ ಬೇಡಿಕೆ ಇದೆ. ಶ್ರೀರಂಗಪಟ್ಟಣ, ಮಂಡ್ಯ ಭಾಗದ ರೈತರು, ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಭೇಟಿ ಮಾಡಿ ನಾಲೆಗಳಿಗೆ ನೀರು ಹರಿಸಲು ಕೋರಿದ್ದಾರೆ ಎಂದರು.
ರೈತರನ್ನು ಉಳಿಸಬೇಕು, ಕುಡಿಯುವ ನೀರನ್ನು ಖಾತರಿಪಡಿಸಿಕೊಳ್ಳಬೇಕು, ತಮಿಳುನಾಡು ಪಾಲಿನ ನೀರು ಹರಿಸುವ ಕೋರ್ಟ್ ಆದೇಶವನ್ನು ಕೂಡ ಪಾಲಿಸಬೇಕು. ಈ ಎಲ್ಲಾ ಹೊಣೆಗಾರಿಕೆಗಳು ಸರ್ಕಾರದ ಮೇಲಿದ್ದು, ಕಾವೇರಿ ನೀರು ನಿಯಂತ್ರಣ ಮಂಡಳಿಯ ಸಭೆಯಲ್ಲಿ ರಾಜ್ಯದ ವಾದ ಮಂಡಿಸುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.

