ಬೆಂಗಳೂರು: ಬಿಎಂಟಿಸಿ ಬಸ್ ಗಳ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಲು ಸಾರಿಗೆ ಸಚಿವ ಬೈರತಿ ಸುರೇಶ್ ಮಾಸ್ಕ್ ಧರಿಸಿ ಪ್ರಯಾಣಿಸಿದ್ದು, ಚಿಲ್ಲರೆ ಇಲ್ಲದ ಕಾರಣಕ್ಕೆ ನಿರ್ವಾಹಕ ಬಸ್ ನಿಂದ ಇಳಿಸಿದ ಘಟನೆ ಬಗ್ಗೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇಂದು ಎಲ್ಲಾ ಕಡೆ QR ಕೋಡ್ ಮೂಲಕ ಹಣ ಪಾವತಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಸಾರಿಗೆ ಸಚಿವರ ಈ ಸುದ್ದಿ ಗಮನಿಸಿ ತಕ್ಷಣ ಈ ಕುರಿತು ನಾನು ಸಾರಿಗೆ ಸಚಿವರನ್ನು ಮಾತನಾಡಿಸಲು ಸಾಕಷ್ಟು ಬಾರಿ ಫೋನ್ ಮಾಡಿದೆ. ಆದರೆ ಅವರ ಜೊತೆ ಮಾತನಾಡುವ ಅವಕಾಶ ಲಭ್ಯವಾಗಲಿಲ್ಲ. ಹಿಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆ ಮಾತನಾಡುವ ಅವಕಾಶ ದೊರಕಿತ್ತು ಎಂದು ತಿಳಿಸಿದ್ದಾರೆ.
ಸಚಿವರು ಈ ರೀತಿ ಮುಖಕ್ಕೆ ಮಾಸ್ಕ್ ಧರಿಸಿ ಮಾರುವೇಷದಲ್ಲಿ ಹೋಗಿ ತನ್ನ ಇಲಾಖೆಯ ಕಾರ್ಯವೈಖರಿಯ ಪರಿಶೀಲನೆ ಮಾಡಿರುವುದು ನಿಜಕ್ಕೂ ಸ್ತುತ್ಯಾರ್ಹ. ಸಚಿವರು ₹ 100 ನೋಟನ್ನು ತನ್ನ ಟಿಕೆಟ್ ಗೆಂದು ಕೊಟ್ಟಾಗ, ಕಂಡಕ್ಟರ್ ಚಿಲ್ಲರೆ ಕೊಡಿ ಎಂದು ಕೇಳಿರುವುದು ಸಹಜವೇ. ಆದರೆ ಇದು “ಚಿಲ್ಲರೆ ಕೊಟ್ಟು ಸಹಕರಿಸಿ” ಎಂಬ ಕಾಲವಲ್ಲ.
ಇಂದು ಎಲ್ಲಾ ಕಡೆ QR ಕೋಡ್ ಮೂಲಕ ಹಣ ಪಾವತಿ ಮಾಡಲು ವ್ಯವಸ್ಥೆ ಇರುವಾಗ ಬಿಎಂಟಿಸಿ ಬಸ್ ಗಳಲ್ಲೂ ಕಂಡಕ್ಟರ್ ಬಳಿ ಇರುವ ಟಿಕೆಟ್ ಕೊಡುವ ಮೆಷಿನ್ ನಲ್ಲಿಯೇ ಈ ವ್ಯವಸ್ಥೆ ಇರುತ್ತದೆ ಎಂಬುದು ನನಗಿರುವ ಮಾಹಿತಿ. ಆಗಿದ್ದ ಮೇಲೆ ಮಂತ್ರಿಗಳಿಗೆ ಈ ರೀತಿಯ ಅನುಭವ ಹೇಗೆ ಆಯಿತು ಎಂದು ಪ್ರಶ್ನಿಸಿದ್ದಾರೆ.

