ಮೈಸೂರು: ದೇಶ ಕಂಡ ಮಹಾನ್ ಗಾಯಕಿ, ಗಾನಕೋಗಿಲೆ ಎಸ್.ಜಾನಕಿ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಅವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಹಾರಾಜಾ ಕಾಲೇಜು ಮೈದಾನದಿಂದ ಎಸ್.ಜಾನಕಿ ಅವರ ಪಾರ್ಥಿವಶರೀರದ ಅಂತಿಮ ಯಾತ್ರೆ ಆರಂಭವಾಗಿದೆ.
ವಯೋಸಹಜ ಕಾಯಿಲೆಯಿಲೆಯಿಂದ ಬಳಲುತ್ತಿದ್ದ ಎಸ್ ಜಾನಕಿ (88) ಶನಿವಾರ ಸಂಜೆ 7:30ರ ಸುಮಾರಿಗೆ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಮೈಸೂರಿನಲ್ಲಿಯೇ ತಮ್ಮ ಜೀವನದ ಕೊನೆ ದಿನಗಳನ್ನು ಕಳೆಯಬೇಕು ಎಂಬುದು ಅವರ ಆಸೆಯಾಗಿತ್ತು. ಅದರಂತೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದ ಫಾರ್ಮ್ ಹೌಸ್ ನಲ್ಲಿ ಎಸ್.ಜಾನಕಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಇಂದು ಬೆಳಿಗ್ಗೆ 8 ಗಂಟೆಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಎಸ್.ಜಾನಕಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆಯವರೆಗೆ ಅಪಾರ ಅಭಿಮಾನಿಗಳು, ಸಂಗೀತ ದಿಗ್ಗಜರು, ಸಿನಿ ತಾರೆಯರು, ರಾಜಕೀಯ ನಾಯಕರು, ಗಣ್ಯಾತಿ ಗಣ್ಯರು ಗಾನಕೋಗಿಲೆಯ ಅಂತಿಮದರ್ಶನ ಪಡೆದು ನಮನ ಸಲ್ಲಿಸಿದರು. ಮಧ್ಯಾಹ್ನ ಮೂರು ಗಂಟೆ ಬಳಿಕ ಮಹಾರಾಜ ಕಾಲೇಜು ಮೈದಾನದಿಂದ ಎಸ್.ಜಾನಕಿ ಅವರ ಅಂತಿಮ ಯಾತ್ರೆ ಆರಂಭವಾಗಿದೆ.
ಎಸ್.ಜಾನಕಿ ಅವರ ಭಾವಚಿತ್ರವಿರುವ ವಾಹನದಲ್ಲಿ ಅವರ ಪಾರ್ಥೀವಶರೀರವಿಟ್ಟು ಕಣಿಯನಹುಂಡಿಯವರೆಗೆ ಅಂತಿಮ ಯಾತ್ರೆ ಸಾಗಿದೆ. ದಾರಿಯುದ್ದಕ್ಕೂ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಗಿದ್ದಾರೆ. ಇಂದು ಸಂಜೆ ಕಣಿಯನಹುಂಡಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ, ಸಕಲ ಸ್ರ್ಕಾರಿ ಗೌರವಗಳೊಂದಿಗೆ ಎಸ್.ಜಾನಕಿತ್ಯವರ ಅಂತ್ಯಕ್ರಿಯೆ ನೆರವೇರಲಿದೆ.

