ಸಂಜೆಯ ಚಹಾ ಸಮಯವಿರಲಿ, ಸ್ನೇಹಿತರೊಂದಿಗೆ ಸಿನಿಮಾ ನೋಡುವ ಸಮಯವಿರಲಿ ಅಥವಾ ಹಸಿವಾದಾಗ ತಕ್ಷಣಕ್ಕೆ ಕೈಗೆ ಸಿಗುವ ಕುರುಕಲು ತಿಂಡಿಯಿರಲಿ, ನಮ್ಮಲ್ಲಿ ಹೆಚ್ಚಿನವರು ಆಲೂ ಭುಜಿಯಾ ಅಥವಾ ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್‌ಗಳನ್ನು ಆಯ್ದುಕೊಳ್ಳುತ್ತಾರೆ. ಈ ಎರಡೂ ತಿಂಡಿಗಳು ನೋಡಲು ಆಲೂಗಡ್ಡೆಯಿಂದಲೇ ತಯಾರಾದಂತೆ ಕಂಡರೂ, ಇವುಗಳ ತಯಾರಿಕಾ ವಿಧಾನ, ಬಳಸುವ ಪದಾರ್ಥಗಳು ಮತ್ತು ಪೌಷ್ಟಿಕಾಂಶದ ಮೌಲ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಎಣ್ಣೆಯಲ್ಲಿ ಕರಿದ ಈ ಎರಡು ಜನಪ್ರಿಯ ಸ್ನಾಕ್ಸ್‌ಗಳಲ್ಲಿ ಆರೋಗ್ಯದ ದೃಷ್ಟಿಯಿಂದ ಯಾವುದು ಉತ್ತಮ ಎಂಬ ಮಾಹಿತಿ ಇಲ್ಲಿದೆ.
ರುಚಿ ಮತ್ತು ವಿನ್ಯಾಸದ ವ್ಯತ್ಯಾಸ
ಸಣ್ಣ ಶಾವಿಗೆಯಂತೆ ಕಾಣುವ ಆಲೂ ಭುಜಿಯಾ ಗರಿಗರಿಯಾಗಿದ್ದು, ಖಾರ ಹಾಗೂ ಉಪ್ಪಿನಿಂದ ಕೂಡಿರುತ್ತದೆ. ಇತ್ತ ತೆಳುವಾಗಿ, ದುಂಡಗೆ ಕತ್ತರಿಸಿದ ಆಲೂಗಡ್ಡೆ ಚಿಪ್ಸ್ ಹಗುರವಾದ ವಿನ್ಯಾಸ ಹೊಂದಿದ್ದು, ತಿನ್ನಲು ಹೆಚ್ಚು ಕ್ರಿಸ್ಪಿಯಾಗಿರುತ್ತದೆ.
ಬಳಸುವ ಪದಾರ್ಥಗಳು ಮತ್ತು ಪೌಷ್ಟಿಕಾಂಶ
ಆಲೂ ಭುಜಿಯಾವನ್ನು ಕೇವಲ ಆಲೂಗಡ್ಡೆಯಿಂದಷ್ಟೇ ಮಾಡುವುದಿಲ್ಲ. ಇದರಲ್ಲಿ ಬೇಯಿಸಿದ ಆಲೂಗಡ್ಡೆಯೊಂದಿಗೆ ಕಡಲೆಹಿಟ್ಟು, ಮಟ್ ಕೀ ಅಥವಾ ಕರಬೆಳ್ಳೆ ಹಿಟ್ಟು ಮತ್ತು ವಿವಿಧ ಮಸಾಲೆಗಳನ್ನು ಬಳಸಲಾಗುತ್ತದೆ. ಕಡಲೆಹಿಟ್ಟು ಮತ್ತು ಬೇಳೆಕಾಳುಗಳ ಹಿಟ್ಟು ಬಳಸುವುದರಿಂದ, ಇದು ಸಾಮಾನ್ಯ ಆಲೂಗಡ್ಡೆ ಚಿಪ್ಸ್‌ಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದ ಪ್ರೋಟೀನ್ ಮತ್ತು ಫೈಬರ್ ಅಂಶವನ್ನು ಹೊಂದಿರುತ್ತದೆ.
ಆದರೆ, ಮಾರುಕಟ್ಟೆಯಲ್ಲಿ ಸಿಗುವ ಆಲೂ ಭುಜಿಯಾವನ್ನು ಅತಿಯಾಗಿ ಎಣ್ಣೆಯಲ್ಲಿ ಕರಿಯುವುದರಿಂದ ಇದರಲ್ಲಿ ಕ್ಯಾಲೊರಿ ಮತ್ತು ಕೊಬ್ಬಿನಂಶ ಹೆಚ್ಚಿರುತ್ತದೆ. ಜೊತೆಗೆ ಉಪ್ಪಿನ ಪ್ರಮಾಣವೂ ಹೆಚ್ಚಿರುವುದರಿಂದ ಅಧಿಕ ರಕ್ತದೊತ್ತಡ ಹೊಂದಿರುವವರು ಅಥವಾ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಅಷ್ಟಾಗಿ ಸೂಕ್ತವಲ್ಲ.
ಆದಾಗ್ಯೂ, ಕೃತಕ ಬಣ್ಣ ಹಾಗೂ ಪ್ರಿಸರ್ವೇಟಿವ್‌ಗಳನ್ನು ಹೊಂದಿರುವ ಆಲೂಗಡ್ಡೆ ಚಿಪ್ಸ್ ಅಥವಾ ಬಿಸ್ಕತ್ತುಗಳಿಗೆ ಹೋಲಿಸಿದರೆ, ಆಲೂ ಭುಜಿಯಾ ಸ್ವಲ್ಪ ಮಟ್ಟಿಗೆ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದರಲ್ಲಿ ನೈಸರ್ಗಿಕ ಪದಾರ್ಥಗಳ ಬಳಕೆ ಹೆಚ್ಚಿರುತ್ತದೆ.
ಮನೆಯಲ್ಲೇ ತಯಾರಿಸಿ ಆರೋಗ್ಯ ಕಾಪಾಡಿಕೊಳ್ಳಿ
ಇವೆರಡರಲ್ಲಿ ಹೆಚ್ಚು ಆರೋಗ್ಯಕರವಾದದ್ದನ್ನು ಆರಿಸಬೇಕೆಂದರೆ ಮನೆಯಲ್ಲೇ ಆಲೂ ಭುಜಿಯಾ ತಯಾರಿಸುವುದು ಅತ್ಯುತ್ತಮ ಮಾರ್ಗ. ಕಡಲೆಹಿಟ್ಟು, ಬೆಂಕಿ ಬೇಳೆ ಅಥವಾ ಮಟ್ ಕೀ ಹಿಟ್ಟು, ಬೇಯಿಸಿದ ಆಲೂಗಡ್ಡೆ ಮತ್ತು ಲಘು ಮಸಾಲೆಗಳನ್ನು ಸೇರಿಸಿ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ಇದರ ಪೌಷ್ಟಿಕಾಂಶವನ್ನು ಮತ್ತಷ್ಟು ಹೆಚ್ಚಿಸಲು ಪಾಲಕ್ ಅಥವಾ ಬೀಟ್‌ರೂಟ್ ಪ್ಯೂರಿಯನ್ನು ಸೇರಿಸಬಹುದು. ಇದರಿಂದ ತಿಂಡಿಗೆ ನೈಸರ್ಗಿಕ ಬಣ್ಣವೂ ಸಿಗುತ್ತದೆ.
ನಂತರ ಶಾವಿಗೆ ಒರಳು ಬಳಸಿ ತೆಳುವಾದ ಆಲೂ ಭುಜಿಯಾ ಆಕಾರ ನೀಡಿ, ಅದನ್ನು ಎಣ್ಣೆಯಲ್ಲಿ ಕರಿಯುವ ಬದಲು ಏರ್ ಫ್ರೈಯರ್ ಬಳಸಿ ಬೇಯಿಸಿದರೆ ಅತ್ಯಂತ ಕಡಿಮೆ ಎಣ್ಣೆಯ, ಆರೋಗ್ಯಕರ ಸ್ನಾಕ್ಸ್ ಸಿದ್ಧವಾಗುತ್ತದೆ.
ಸಾಮಾನ್ಯ ಚಿಪ್ಸ್‌ಗಿಂತ ಆಲೂ ಭುಜಿಯಾದಲ್ಲಿ ಪೌಷ್ಟಿಕಾಂಶ ಕೊಂಚ ಹೆಚ್ಚಿದ್ದರೂ, ಮಾರುಕಟ್ಟೆಯ ಪ್ಯಾಕೆಟ್ ತಿಂಡಿಗಳಲ್ಲಿ ಉಪ್ಪು ಮತ್ತು ಕೊಬ್ಬಿನಂಶ ಹೆಚ್ಚಿರುವುದರಿಂದ ಇವುಗಳನ್ನು ಮಿತವಾಗಿ ಸೇವಿಸುವುದು ಒಳಿತು.

