ಕೇರಳದ ಕಣ್ಣೂರು ಜಿಲ್ಲೆಯಲ್ಲಿ ತುಟಿಗೆ ಆದ ಸಣ್ಣ ಗಾಯಕ್ಕೆ ಚಿಕಿತ್ಸೆ ನೀಡುವ ವೇಳೆ ನೀಡಲಾದ ಅನಸ್ತೇಶಿಯಾ (ನಿಶ್ಚೇತನ) ಬಳಿಕ ಆರೋಗ್ಯ ಹದಗೆಟ್ಟು 18 ತಿಂಗಳ ಗಂಡು ಮಗು ಐದು ದಿನಗಳ ಕಾಲ ಚಿಕಿತ್ಸೆ ಪಡೆದರೂ ಬದುಕುಳಿಯದೆ ಮೃತಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಕುಟುಂಬದ ದೂರಿನ ಮೇರೆಗೆ ಅನಸ್ತೇಶಿಯಾ ತಜ್ಞರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಏನಿದು ಘಟನೆ
ಕೇರಳದ ಕಣ್ಣೂರು ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ 18 ತಿಂಗಳ ಗಂಡು ಮಗು ಅನಸ್ತೇಶಿಯಾ ನೀಡಿದ ಬಳಿಕ ಉಂಟಾದ ತೀವ್ರ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿರುವ ಘಟನೆ ನಡೆದಿದೆ.ಮಾಹಿತಿಯ ಪ್ರಕಾರ, ಜುಲೈ 5ರಂದು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಮಗುವಿನ ತುಟಿಗೆ ಗಾಯವಾಗಿತ್ತು. ಬಳಿಕ ಪೋಷಕರು ಮಗುವನ್ನು ಪಯ್ಯನ್ನೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಿದ್ದರು. ತುಟಿಯ ಗಾಯಕ್ಕೆ ಹೊಲಿಗೆ ಹಾಕಲು ವೈದ್ಯರು ಅನಸ್ತೇಶಿಯಾ ನೀಡಿದ್ದರು.
ಮಗುವಿನ ಕುಟುಂಬದ ಆರೋಪದಂತೆ, ಅನಸ್ತೇಶಿಯಾ ನೀಡಿದ ತಕ್ಷಣವೇ ಮಗುವಿನ ಆರೋಗ್ಯ ಹದಗೆಟ್ಟಿದ್ದು, ನಂತರ ಅದು ಪ್ರಜ್ಞೆಗೆ ಮರಳಲೇ ಇಲ್ಲ. ಸ್ಥಿತಿ ಗಂಭೀರವಾಗುತ್ತಿದ್ದಂತೆ ಮಗುವನ್ನು ಆಸ್ಪತ್ರೆಯ ಕಣ್ಣೂರು ಘಟಕಕ್ಕೆ ಸ್ಥಳಾಂತರಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಜುಲೈ 10ರಂದು ರಾತ್ರಿ ಸುಮಾರು 9 ಗಂಟೆಗೆ ಮಗು ಮೃತಪಟ್ಟಿದೆ.
ಕುಟುಂಬದ ದೂರಿನ ಮೇರೆಗೆ ಸಂಬಂಧಿತ ಅನಸ್ತೇಶಿಯಾ ತಜ್ಞರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಕಲಂ 125ರಡಿ ಪ್ರಕರಣ ದಾಖಲಾಗಿದ್ದು, ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ ಕೃತ್ಯಕ್ಕೆ ಈ ಕಲಂ ಅನ್ವಯವಾಗುತ್ತದೆ. ಈ ಅಪರಾಧಕ್ಕೆ ಗರಿಷ್ಠ ಮೂರು ತಿಂಗಳ ಜೈಲು ಶಿಕ್ಷೆಯ ಅವಕಾಶವಿದೆ.
ಇತ್ತ ಆಸ್ಪತ್ರೆ ಆಡಳಿತವು ವೈದ್ಯಕೀಯ ನಿರ್ಲಕ್ಷ್ಯದ ಆರೋಪವನ್ನು ತಳ್ಳಿಹಾಕಿದೆ. ಸರಿಯಾದ ಪ್ರಮಾಣದಲ್ಲೇ ಅನಸ್ತೇಶಿಯಾ ನೀಡಲಾಗಿತ್ತು. ಆದರೆ ಅನಸ್ತೇಶಿಯಾ ನೀಡಿದ ಕೂಡಲೇ ಮಗುವಿಗೆ ಅನಿರೀಕ್ಷಿತ ಹೃದಯಾಘಾತ (Cardiac Arrest) ಸಂಭವಿಸಿತ್ತು ಎಂದು ಆಸ್ಪತ್ರೆ ತಿಳಿಸಿದೆ.
ತಕ್ಷಣವೇ ಮಗುವಿಗೆ ವೆಂಟಿಲೇಟರ್ ಮೂಲಕ ತುರ್ತು ಚಿಕಿತ್ಸೆ ನೀಡಿ ಕಣ್ಣೂರು ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ಎಲ್ಲಾ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಿದರೂ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ.ಆಸ್ಪತ್ರೆಯ ಹೇಳಿಕೆಯ ಪ್ರಕಾರ, ಸರಿಯಾದ ಪ್ರಮಾಣದಲ್ಲಿ ಅನಸ್ತೇಶಿಯಾ ನೀಡಿದರೂ ಅಪರೂಪದ ಸಂದರ್ಭಗಳಲ್ಲಿ ಇಂತಹ ಗಂಭೀರ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

