ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಸೇರಿದಂತೆ ಹಲವು ಕಡೆ ಮಳೆ ಆರ್ಭಟ ಮುಂದುವರಿದಿದೆ.
ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕೆ ವಿದ್ಯಾರ್ಥಿಗಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಹಲವು ತಾಲೂಕುಗಳಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಚಿಕ್ಕಮಗಳೂರಿನ 6 ತಾಲೂಕುಗಳಲ್ಲಿ ರಜೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ 6 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮೂಡಿಗೆರೆ, ಕೊಪ್ಪ ಮತ್ತು ಎನ್.ಆರ್.ಪುರ ತಾಲೂಕುಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶೃಂಗೇರಿ ತಾಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿರುವುದರಿಂದ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕಳಸ ತಾಲೂಕಿನಲ್ಲಿ ಅಂಗನವಾಡಿ ಸೇರಿದಂತೆ 1 ರಿಂದ 7ನೇ ತರಗತಿಯವರೆಗಿನ ಪ್ರಾಥಮಿಕ ಶಾಲೆಗಳಿಗೆ ಮಾತ್ರ ರಜೆ ಇರಲಿದೆ. ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಯ ಜಾಗರ, ವಸ್ತಾರೆ, ಖಾಂಡ್ಯ, ಆಲ್ದೂರು ಮತ್ತು ಆವತಿ ಹೋಬಳಿಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 3 ತಾಲೂಕುಗಳಲ್ಲಿ ರಜೆ
ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ ಮತ್ತು ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 5 ತಾಲೂಕುಗಳಲ್ಲಿ ರಜೆ
ಉತ್ತರ ಕನ್ನಡ ಜಿಲ್ಲೆಯಲ್ಲೂ ಧಾರಕಾರ ಮಳೆಯಾಗುತ್ತಿದ್ದು, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಿರಸಿ, ಸಿದ್ದಾಪುರ, ಜೋಯಿಡಾ, ದಾಂಡೇಲಿ ಮತ್ತು ಯಲ್ಲಾಪುರ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ.
ಹಾಸನ
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಕಲೇಶಪುರ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿ ತಹಶೀಲ್ದಾರ್ ಸುಪ್ರಿತಾ ಆದೇಶಿಸಿದ್ದಾರೆ.
ಬೆಳಗಾವಿ
ಬೆಳಗಾವಿ ಜಿಲ್ಲೆಯಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ಬೆಳಗಾವಿ ನಗರ ಮತ್ತು ಖಾನಾಪುರ ತಾಲೂಕಿನಾದ್ಯಂತ ಎಲ್ಲಾ ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶ ಹೊರಡಿಸಿದ್ದಾರೆ.

