ಬೆಂಗಳೂರು: ರಾಜ್ಯದಲ್ಲಿ ಬೇರೆ ರಾಜ್ಯದ ಅಧಿಕಾರಿಗಳನ್ನು ಕರೆತಂದು ಎಸ್ಐಆರ್ (SIR) ಮಾಡಿಸಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿ ಎಸ್ಐಆರ್ ಸರ್ಕಾರದ ಸಹಕಾರ ಇಲ್ಲದೇ ಬೇಕಾಬಿಟ್ಟಿಯಾಗಿ ನಡೆಯುತ್ತಿದೆ. ಅಧಿಕಾರಿಗಳು ಎಸ್ಐಆರ್ಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಎಸ್ಐಆರ್ ಅರ್ಜಿಗಳನ್ನು ಶಾದಿ ಮಹಲ್, ಮಸೀದಿಗಳು, ಮಾರ್ಕೆಟ್ಗಳಲ್ಲಿ ಕ್ಯೂ ನಿಲ್ಲಿಸಿ ಕೊಡಲಾಗ್ತಿದೆ. ಆರಂಭದಲ್ಲೇ ಎಸ್ಐಆರ್ ನಿಯಮಗಳ ಉಲ್ಲಂಘನೆ ಆಗುತ್ತಿದೆ. ಅನರ್ಹ ಮತದಾರರ ಹೆಸರು ರದ್ದು ಮಾಡುವ ಪ್ರಮಾಣ ಕಡಿಮೆ ಆಗ್ತಿದೆ ಎಂದು ಆರೋಪಿಸಿದರು.
ಯಾರನ್ನೂ ಪಟ್ಟಿಯಿಂದ ತೆಗೆಯಬೇಡಿ ಎಂದು ಸರ್ಕಾರ ಹೇಳಿರಬೇಕು. ವಿದೇಶಿಯರಿರಲಿ ಯಾರೇ ಅನರ್ಹರಿರಲಿ ಹೆಸರು ತೆಗೀಬೇಡಿ ಅಂತ ಸೂಚನೆ ಕೊಟ್ಟಂತೆ ಕಾಣುತ್ತಿದೆ. ನಾವು ಕೇಂದ್ರ ಚುನಾವಣಾ ಆಯೊಗಕ್ಕೆ ದೂರು ಕೊಟ್ಟಿದ್ದೇವೆ. ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಸಾಮೂಹಿಕ ಎಸ್ಐಆರ್ ನಡೆದಿದೆ. ಅದನ್ನು ರದ್ದು ಮಾಡಿ, ಹೊಸದಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಬೇಕಾಯ್ತು. ಇಲ್ಲೂ ಬೇರೆ ರಾಜ್ಯದ ಅಧಿಕಾರಿಗಳನ್ನು ಕರೆತರಲಿ. ಅಕ್ರಮ ವಲಸಿಗರ ಹೆಸರು ಸೇರ್ಪಡೆಯಾಗುತ್ತಿದೆ. ಈ ರೀತಿ ಆಗಬಾರದು ಎಂದು ಎಚ್ಚರಿಸಿದ್ದಾರೆ.

