ಬೆಳಗಿನ ತಿಂಡಿಗೆ ಪ್ರತಿದಿನ ಇಡ್ಲಿ, ದೋಸೆ ಮಾಡುವ ಬದಲು ಕೆಲವೊಮ್ಮೆ ಹೊಸ ರುಚಿ ಪ್ರಯತ್ನಿಸಬಹುದು. ಮಕ್ಕಳಿಗೆ ಪಾಲಕ್ ಸೊಪ್ಪನ್ನು ತಿನ್ನಿಸಲು ಕಷ್ಟವಾಗುತ್ತಿದ್ದರೆ, ಅದನ್ನು ಇಡ್ಲಿ ಹಿಟ್ಟಿಗೆ ಸೇರಿಸಿ ಮಾಡಬಹುದು. ಪಾಲಕ್ ಹಿಟ್ಟಿನ ಜೊತೆಗೆ ಆಲೂಗಡ್ಡೆ ಮಸಾಲೆ ತುಂಬಿ ಮಾಡುವ ಸ್ಟಫ್ಡ್ ಪಾಲಕ್ ಇಡ್ಲಿ ರುಚಿಯಾಗಿಯೂ ಇರುತ್ತದೆ.
ಬೇಕಾಗುವ ಪದಾರ್ಥಗಳು
ಇಡ್ಲಿ ಹಿಟ್ಟಿಗೆ:
ಇಡ್ಲಿ ಹಿಟ್ಟು
ಪಾಲಕ್ ಸೊಪ್ಪು
1-2 ಹಸಿರು ಮೆಣಸಿನಕಾಯಿ
ಸ್ವಲ್ಪ ಶುಂಠಿ
ಉಪ್ಪು
ಆಲೂಗಡ್ಡೆ ಸ್ಟಫಿಂಗ್‌ಗೆ:
ಬೇಯಿಸಿದ ಆಲೂಗಡ್ಡೆ
ಈರುಳ್ಳಿ
ಸಾಸಿವೆ
ಜೀರಿಗೆ
ಅರಿಶಿನ ಪುಡಿ
ಗರಂ ಮಸಾಲಾ
ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ಕುದಿಯುತ್ತಿರುವ ನೀರಿನಲ್ಲಿ ಸುಮಾರು 2 ನಿಮಿಷ ಬೇಯಿಸಿ. ನಂತರ ಅದನ್ನು ತೆಗೆದು ತಣ್ಣಗಾಗಲು ಬಿಡಿ.
ತಣ್ಣಗಾದ ಪಾಲಕ್ ಸೊಪ್ಪನ್ನು ಹಸಿರು ಮೆಣಸಿನಕಾಯಿ ಮತ್ತು ಶುಂಠಿಯೊಂದಿಗೆ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಪಾಲಕ್ ಪೇಸ್ಟ್ ಅನ್ನು ಇಡ್ಲಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಸ್ಟಫಿಂಗ್ ತಯಾರಿಸಿಕೊಳ್ಳಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಮತ್ತು ಜೀರಿಗೆ ಒಗ್ಗರಣೆ ಮಾಡಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ಅರಿಶಿನ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ.
ನಂತರ ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ ಹಾಕಿ. ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ. ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಸಣ್ಣ ಉಂಡೆಗಳನ್ನಾಗಿ ಮಾಡಿ ಸ್ವಲ್ಪ ಚಪ್ಪಟೆ ಮಾಡಿಟ್ಟುಕೊಳ್ಳಿ.
ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ, ಮೊದಲು ಒಂದು ಚಮಚ ಪಾಲಕ್ ಇಡ್ಲಿ ಹಿಟ್ಟು ಹಾಕಿ. ಅದರ ಮಧ್ಯದಲ್ಲಿ ಆಲೂಗಡ್ಡೆ ಮಸಾಲೆಯ ಉಂಡೆಯನ್ನು ಇಟ್ಟು, ಮೇಲಿನಿಂದ ಮತ್ತೊಂದು ಚಮಚ ಹಿಟ್ಟು ಹಾಕಿ ಸಂಪೂರ್ಣವಾಗಿ ಮುಚ್ಚಿ.
ಇಡ್ಲಿ ಪಾತ್ರೆಯಲ್ಲಿ ನೀರು ಕುದಿಸಿ, ತಟ್ಟೆಯನ್ನು ಇಟ್ಟು ಸುಮಾರು 10ರಿಂದ 12 ನಿಮಿಷ ಆವಿಯಲ್ಲಿ ಬೇಯಿಸಿ. ಇಡ್ಲಿ ಬೆಂದ ಬಳಿಕ ಸ್ವಲ್ಪ ತಣ್ಣಗಾಗಲು ಬಿಟ್ಟು ತೆಗೆದುಕೊಳ್ಳಿ.ಬಿಸಿ ಬಿಸಿ ಸ್ಟಫ್ಡ್ ಪಾಲಕ್ ಇಡ್ಲಿಯನ್ನು ಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಬಹುದು.

