ನವದೆಹಲಿ: ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (SIT) ಅಥವಾ CBI ತನಿಖೆ ನಡೆಸುವಂತೆ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ನ್ಯಾಯಾಲಯದ ರಜೆ ಮುಗಿದ ಬಳಿಕ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಪ್ರಕರಣವನ್ನು ತುರ್ತಾಗಿ ಪಟ್ಟಿ ಮಾಡುವಂತೆ ಮನವಿ ಮಾಡಿದ ವೇಳೆ ಪೀಠವು, “ಇದರಲ್ಲಿ ತುರ್ತು ಏನಿದೆ?” ಎಂದು ಪ್ರಶ್ನಿಸಿತು. ಅಲ್ಲದೆ, “ನ್ಯಾಯಾಲಯ ಪುನರಾರಂಭವಾದ ಬಳಿಕ ವಿಚಾರಣೆ ನಡೆದರೆ ಆಕಾಶವೇ ಕುಸಿದು ಬೀಳುವುದಿಲ್ಲ” ಎಂದು ಹೇಳಿ ತುರ್ತು ವಿಚಾರಣೆಗೆ ನಿರಾಕರಿಸಿತು.
ಇದಕ್ಕೂ ನಡುವೆ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣದ ತನಿಖೆ ಹೊಸ ಹಂತಕ್ಕೆ ಪ್ರವೇಶಿಸಿದ್ದು, ಪ್ರಮುಖ ಆರೋಪಿ ಅನುಕಲ್ಪ್ ಮಿಶ್ರಾ ಅವರ ಹಣಕಾಸು ವ್ಯವಹಾರಗಳು, ಬ್ಯಾಂಕ್ ಖಾತೆಗಳು, ಹೂಡಿಕೆಗಳು ಹಾಗೂ ಆಸ್ತಿ ಸಂಪಾದನೆಯ ಮೂಲಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಭಕ್ತರ ದೇಣಿಗೆಯಿಂದ ದುರುಪಯೋಗಪಡಿಸಿಕೊಂಡ ಹಣವನ್ನು ಬಳಸಿ ಆಸ್ತಿಗಳನ್ನು ಖರೀದಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಅನುಕಲ್ಪ್ ಮಿಶ್ರಾ ರಾಮ ಮಂದಿರದ ನಗದು ದೇಣಿಗೆ ಎಣಿಕೆ ಕಾರ್ಯವನ್ನು ನಿರ್ವಹಿಸುತ್ತಿದ್ದ ಔಟ್ಸೋರ್ಸಿಂಗ್ ಸಂಸ್ಥೆಯ ಸಿಬ್ಬಂದಿಯಾಗಿದ್ದು, ದೇಣಿಗೆ ದುರ್ಬಳಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ತನಿಖೆಯಲ್ಲಿ ಅವರ ಬಾವ ಲವ್ಕುಶ್ ಮಿಶ್ರಾ ಕೂಡ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಅನುಕಲ್ಪ್ ಅವರನ್ನೇ ಅದೇ ನಗದು ಎಣಿಕೆ ತಂಡದಲ್ಲಿ ನೇಮಕ ಮಾಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದುವರೆಗೆ ಈ ಪ್ರಕರಣದಲ್ಲಿ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ.ಇನ್ನೊಂದೆಡೆ, ಪೊಲೀಸರು ಅಯೋಧ್ಯಾ ಜಿಲ್ಲೆಯ ಬಸವಾ ಗ್ರಾಮದಲ್ಲಿರುವ ಅನುಕಲ್ಪ್ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಕುಟುಂಬದ ಆರ್ಥಿಕ ಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಅನುಕಲ್ಪ್ ಇತ್ತೀಚೆಗೆ ಗ್ರಾಮದ ಹೊರವಲಯದಲ್ಲಿ ಫಾರ್ಮ್ಹೌಸ್ ನಿರ್ಮಿಸಿದ್ದಾರೆಯೇ, ಕಳೆದ ವರ್ಷ ಸುಮಾರು ₹65 ಲಕ್ಷ ಮೌಲ್ಯದ ಮನೆ ಖರೀದಿಸಿದ್ದಾರೆಯೇ ಹಾಗೂ ಮಹೀಂದ್ರಾ ಸ್ಕಾರ್ಪಿಯೋ SUV ಖರೀದಿಸಲು ಯೋಜನೆ ರೂಪಿಸಿದ್ದಾರೆಯೇ ಎಂಬ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ.

