ಬೆಂಗಳೂರು: ಈ ಹಿಂದೆ ಪ್ರಧಾನಿ ಮೋದಿ ಅವರು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿಯನ್ನು ಸ್ವಯಂ ಪ್ರೇರಿತರಾಗಿ ತ್ಯಜಿಸಿ ಎಂದು ದೇಶದ ಜನತೆಗೆ ನೀಡಿದ ಕರೆಯ ಅನ್ವಯ ಸ್ಪಂದನೆ ವ್ಯಕ್ತವಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ, ಶಕ್ತಿ ಯೋಜನೆಗಳು ಅನರ್ಹರ ಪಾಲಾಗುವುದನ್ನು ತಡೆಯಲು ಹಲವು ಸುಧಾರಣೆ ಕ್ರಮಗಳನ್ನು ಕೈಗೊಂಡಿದೆ.
ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಯ ಲಾಭ ತ್ಯಜಿಸುವಂತೆ ಮನವಿ ಮಾಡಲು ಚಿಂತನೆ ನಡೆಸಿದೆ. ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ನೀಡಲು ಕ್ರಮ ಕೈಗೊಂಡಿದ್ದು, ಸರ್ಕಾರಿ ಅಧಿಕಾರಿಗಳು, ನೌಕರರು, ತೆರಿಗೆ ಪಾವತಿದಾರರಿಗೆ ಶಕ್ತಿ ಯೋಜನೆಯ ಸೌಲಭ್ಯ ನೀಡಬೇಕೇ ಅಥವಾ ಅವರು ಕೂಡ ಯೋಜನೆಯ ಲಾಭ ಬಿಟ್ಟುಕೊಡುವಂತೆ ಮನವಿ ಮಾಡಬೇಕೆ ಎನ್ನುವ ಬಗ್ಗೆ ಚಿಂತಿಸಿ ವರದಿ ನೀಡಲು ಇಲಾಖೆಯ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ, ಶಕ್ತಿ ಯೋಜನೆ ಲಾಭವನ್ನು ಉಳ್ಳವರು ತ್ಯಜಿಸುವ ಬಗ್ಗೆ ಇಂಧನ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆಯ ಮುಖ್ಯಸ್ಥರಿಗೆ ಗ್ಯಾರಂಟಿ ಯೋಜನೆಗಳ ಸುಧಾರಣೆ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದೆ.
ಗೃಹಲಕ್ಷ್ಮಿ ಯೋಜನೆ ಕನಿಷ್ಠ ಶೇಕಡ 5ರಷ್ಟು ಮಂದಿ ಯೋಜನೆ ತ್ಯಜಿಸಿದರೂ 1200 ಕೋಟಿ ರೂಪಾಯಿ ಉಳಿತಾಯವಾಗುತ್ತದೆ. ಗೃಹಜ್ಯೋತಿ ಯೋಜನೆ ಬೇಡ ಎಂದು ಉಳ್ಳವರು ತ್ಯಜಿಸಿದಲ್ಲಿ ಸರ್ಕಾರಕ್ಕೆ 600 ರಿಂದ 700 ಕೋಟಿ ರೂ. ಉಳಿತಾಯವಾಗುತ್ತದೆ. ಶಕ್ತಿ ಯೋಜನೆಯಡಿ ಸರ್ಕಾರಿ ನೌಕರರು ಬಿಟ್ಟುಕೊಟ್ಟಲ್ಲಿ ಪುರುಷ ವಿದ್ಯಾರ್ಥಿಗಳ ಉಚಿತ ಪಾಸ್ ಹಣ ಹೊಂದಿಸಲು ಅನುಕೂಲವಾಗುತ್ತದೆ.
ಸರ್ಕಾರಿ ನೌಕರರಿಗೆ ಶಕ್ತಿ ಯೋಜನೆ ಬೇಕೇ ಬೇಡವೇ ಎನ್ನುವ ಬಗ್ಗೆ ಚರ್ಚೆ ನಡೆದಿದ್ದು, ವರದಿ ಸಲ್ಲಿಸಲು ಸರ್ಕಾರ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಸರ್ಕಾರದ ವಿವಿಧ ಯೋಜನೆಗಳು ಉಳ್ಳವರ ಪಾಲಾಗುವುದನ್ನು ತಡೆಯಲು ಗಿವ್ ಇಟ್ ಅಪ್ ಗೆ ಮನವಿ ಮಾಡಲಾಗುವುದು ಎನ್ನಲಾಗಿದೆ.

