ಬೆಂಗಳೂರು: ಕಾವೇರಿ ಗೋದಾವರಿ ನದಿ ಜೋಡಣೆಯ ಮಹತ್ವದ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.
ಗುರುವಾರ ತುಂಗಭದ್ರಾ ಜಲಾಶಯ ಬಳಿ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಸಮ್ಮುಖದಲ್ಲಿ ನಡೆದ ಆಂತರಿಕ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಕಾವೇರಿ ಮತ್ತು ಗೋದಾವರಿ ನದಿ ಜೋಡಣೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದ್ದು, ಕೇಂದ್ರ ಸರ್ಕಾರ ಒಟ್ಟು 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೆ ಮುಂದಾಗಿದೆ. ಶೇಕಡ 10 ಅನುದಾನವನ್ನು ರಾಜ್ಯ ಸರ್ಕಾರ ಭರಿಸಬೇಕಿದ್ದು, ಇದಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಸರ್ಕಾರದ ಪರವಾಗಿ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯಕ್ಕೆ ಗೋದಾವರಿಯಿಂದ 15.9 ಟಿಎಂಸಿ ನೀರು ಹಂಚಿಕೆಯಾಗಿದ್ದು ಇದನ್ನು ಹೆಚ್ಚಳ ಮಾಡುವ ಬಗ್ಗೆ ಸಿಎಂ ಮನವಿ ಮಾಡಿದ್ದಾರೆ. ಇಂದಿರಾಗಾಂಧಿ ಅವಧಿಯಲ್ಲಿ 1983 ರಲ್ಲಿ ಎನ್.ಟಿ. ರಾಮರಾವ್ ನಾಯಕತ್ವದಲ್ಲಿ ಅವಿಭಜಿತ ಆಂದ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಒಟ್ಟಾಗಿ ಚೆನ್ನೈನ ಕುಡಿಯುವ ನೀರಿಗಾಗಿ 15 ಟಿಎಂಸಿ ಅಡಿ ನೀರು ನೀಡಿದ್ದವು. ಇಂತಹ ಇತಿಹಾಸಿಕ ಒಕ್ಕೂಟ ವ್ಯವಸ್ಥೆಯ ಉದಾಹರಣೆಯ ಪೂರಕ ಮನೋಭಾವದೊಂದಿಗೆ ಮುಂದಿನ ಹಂತದಲ್ಲಿ ಚರ್ಚಿಸಿ ಕಾವೇರಿ -ಗೋದಾವರಿ ನದಿ ಜೋಡಣೆಗೆ ಒಪ್ಪಿಗೆ ನೀಡಬೇಕು. ಇದರಿಂದ ಒಂದು ರಾಜ್ಯದಲ್ಲಿ ಸಂಕಷ್ಟ ಎದುರಾದರೆ ಮತ್ತೊಂದು ರಾಜ್ಯ ನೆರವಾಗಬಹುದು ಎಂದು ಮೂವರು ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

