ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡಿದ್ದ ‘ಆಪರೇಶನ್ ಸಿಂಧೂರ್’ ವೇಳೆ ಹುತಾತ್ಮರಾದ ಆರು ಯೋಧರ ಹೆಸರುಗಳನ್ನು ಕೇಂದ್ರ ಸರ್ಕಾರ ಮೊದಲ ಬಾರಿಗೆ ಅಧಿಕೃತವಾಗಿ ಪ್ರಕಟಿಸಿದೆ.
ಹೌದು. 2025ರ ಏಪ್ರಿಲ್ 22ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 25 ಪ್ರವಾಸಿಗರು ಹಾಗೂ ಒಬ್ಬ ಸ್ಥಳೀಯ ಕುದುರೆ ಮಾರ್ಗದರ್ಶಿ ಸೇರಿ ಒಟ್ಟು 26 ಮಂದಿ ಮೃತಪಟ್ಟಿದ್ದರು.ಈ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ಮೇ 7ರ ಮುಂಜಾನೆ ‘ಆಪರೇಶನ್ ಸಿಂಧೂರ್’ ಆರಂಭಿಸಿ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ನಿಖರ ದಾಳಿ ನಡೆಸಿದ್ದವು.
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಶಾಶ್ವತ ಗೌರವ
ಆಪರೇಶನ್ ವೇಳೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಈ ಆರು ಯೋಧರ ಹೆಸರುಗಳನ್ನು ನವದೆಹಲಿ ಇಂಡಿಯಾ ಗೇಟ್ ಸಮೀಪದ ರಾಷ್ಟ್ರೀಯ ಯುದ್ಧ ಸ್ಮಾರಕದ ವಿಶೇಷ ಗ್ರಾನೈಟ್ ಫಲಕಗಳಲ್ಲಿ ಶಾಶ್ವತವಾಗಿ ಕೆತ್ತಲಾಗುವುದು.
ಹುತಾತ್ಮರಾದ ಯೋಧರು
- ಸುಬೇದಾರ್ ಮೇಜರ್ ಪವನ್ ಕುಮಾರ್ – ಮುಖ್ಯ ಕಚೇರಿ, 10 ಇನ್ಫೆಂಟ್ರಿ ಬ್ರಿಗೇಡ್
- ರೈಫಲ್‌ಮನ್ ಸುನೀಲ್ ಕುಮಾರ್ – 4ನೇ ಬೆಟಾಲಿಯನ್, ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಫೆಂಟ್ರಿ ರೆಜಿಮೆಂಟ್
- ಲಾನ್ಸ್ ನಾಯಕ್ ದಿನೇಶ್ ಕುಮಾರ್ – 5 ಫೀಲ್ಡ್ ರೆಜಿಮೆಂಟ್
- ಅಗ್ನಿವೀರ್ ಮೂಡ್ ಮುರಳಿ ನಾಯಕ್ – 851 ಲೈಟ್ ರೆಜಿಮೆಂಟ್
- ಹವೀಲ್ದಾರ್ ಸುನೀಲ್ ಕುಮಾರ್ ಸಿಂಗ್ – 237 ಫೀಲ್ಡ್ ವರ್ಕ್‌ಶಾಪ್
- ಸಾರ್ಜೆಂಟ್ ಸುರೇಂದ್ರ ಕುಮಾರ್ – 39 ವಿಂಗ್, ಭಾರತೀಯ ವಾಯುಪಡೆ
ಮರಣೋತ್ತರ ಪ್ರಶಸ್ತಿ
- ರೈಫಲ್‌ಮನ್ ಸುನೀಲ್ ಕುಮಾರ್ ಅವರಿಗೆ ಮರಣೋತ್ತರವಾಗಿ ವೀರ ಚಕ್ರ ಪ್ರದಾನ ಮಾಡಲಾಗಿದೆ.
- ಸಾರ್ಜೆಂಟ್ ಸುರೇಂದ್ರ ಕುಮಾರ್ ಅವರಿಗೆ ವಾಯು ಪದಕ ನೀಡಿ ಗೌರವಿಸಲಾಗಿದೆ.
‘ಆಪರೇಶನ್ ಸಿಂಧೂರ್’ ಹಿನ್ನೆಲೆ
2025ರ ಮೇ 7ರಂದು ಭಾರತೀಯ ಸಶಸ್ತ್ರ ಪಡೆಗಳು ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ‘ಆಪರೇಶನ್ ಸಿಂಧೂರ್’ ಆರಂಭಿಸಿತು. ಈ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿ, ಅವರ ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಲಾಯಿತು.ಭಾರತ ತನ್ನ ಕ್ರಮವು ನಿಖರ, ಮಿತ ಮತ್ತು ಅನಗತ್ಯ ಉದ್ವಿಗ್ನತೆ ಸೃಷ್ಟಿಸದ ರೀತಿಯದ್ದಾಗಿತ್ತು ಎಂದು ಸ್ಪಷ್ಟಪಡಿಸಿತು. ಆದರೆ, ಬಳಿಕ ಭಾರತ–ಪಾಕಿಸ್ತಾನ ನಡುವೆ ಮೂರು ದಿನಗಳ ಕಾಲ ಗಡಿ ಉದ್ವಿಗ್ನತೆ ಮುಂದುವರಿಯಿತು. ಅಂತಿಮವಾಗಿ, ಮೇ 10ರಂದು ಉಭಯ ದೇಶಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡವು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 2025ರ ಏಪ್ರಿಲ್ 22ರಂದು ನಡೆದ ಭೀಕರ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡ ಸೇನಾ ಕಾರ್ಯಾಚರಣೆಗೆ ಆಪರೇಶನ್ ಸಿಂಧೂರ್’ ಎಂದು ಹೆಸರು ನೀಡಲಾಯಿತು. ಈ ಕಾರ್ಯಾಚರಣೆಯನ್ನು ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಾಪಡೆ ಸಮನ್ವಯದೊಂದಿಗೆ ನಡೆಸಿದ್ದವು.
ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದರು. ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ಮೇ 7, 2025ರಂದು ‘ಆಪರೇಶನ್ ಸಿಂಧೂರ್’ ಆರಂಭಿಸಿತು.
ಆಪರೇಶನ್ ಸಿಂಧೂರ್‌ನ ಪ್ರಮುಖ ಉದ್ದೇಶ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ತರಬೇತಿ ಶಿಬಿರಗಳು ಹಾಗೂ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಭಯೋತ್ಪಾದನಾ ಜಾಲವನ್ನು ದುರ್ಬಲಗೊಳಿಸುವುದಾಗಿತ್ತು. ಭಾರತ ಈ ಕಾರ್ಯಾಚರಣೆ ಉಗ್ರರ ವಿರುದ್ಧ ಮಾತ್ರವೇ ಆಗಿದ್ದು, ಸಾಮಾನ್ಯ ನಾಗರಿಕರು ಅಥವಾ ಸೇನಾೇತರ ಗುರಿಗಳನ್ನು ಗುರಿಯಾಗಿಸಲಾಗಿಲ್ಲ ಎಂದು ತಿಳಿಸಿತ್ತು.
‘ಸಿಂಧೂರ್’ ಎಂಬ ಹೆಸರು ಏಕೆ?
ಪಹಲ್ಗಾಮ್ ದಾಳಿಯಲ್ಲಿ ತಮ್ಮ ಪತಿಗಳನ್ನು ಕಳೆದುಕೊಂಡ ಮಹಿಳೆಯರ ನೋವು ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಾಚರಣೆಗೆ ಆಪರೇಶನ್ ಸಿಂಧೂರ್ ‘ ಎಂದು ಹೆಸರಿಡಲಾಯಿತು. ‘ಸಿಂಧೂರ್’ವು ವಿವಾಹಿತ ಹಿಂದೂ ಮಹಿಳೆಯರ ಮಂಗಳದ ಸಂಕೇತವಾಗಿದ್ದು, ಈ ಹೆಸರು ದಾಳಿಯ ಮಾನವೀಯ ಪರಿಣಾಮವನ್ನು ಪ್ರತಿಬಿಂಬಿಸುವ ಉದ್ದೇಶ ಹೊಂದಿದೆ ಎಂದು ಕೇಂದ್ರ ಸರ್ಕಾರ ವಿವರಿಸಿತ್ತು. ಕಾರ್ಯಾಚರಣೆಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿ ಪ್ರದೇಶದಲ್ಲಿ ಹಲವು ದಿನಗಳ ಕಾಲ ಉದ್ವಿಗ್ನತೆ ಉಂಟಾಯಿತು. ಉಭಯ ದೇಶಗಳ ನಡುವೆ ದಾಳಿ–ಪ್ರತಿದಾಳಿಗಳು ನಡೆದ ಬಳಿಕ, 2025ರ ಮೇ10 ರಂದು ಕದನ ವಿರಾಮಕ್ಕೆ ಒಪ್ಪಿಗೆ ನೀಡಲಾಯಿತು.

