ಬೆಂಗಳೂರು: ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ರಾಜ್ಯದಲ್ಲಿ ಪಿಂಚಣಿ ಪಡೆಯುತ್ತಿರುವ 23,13,664 ಫಲಾನುಭವಿಗಳ ಮಾಹಿತಿಯಲ್ಲಿ ಸಂಶಯ ಕಂಡು ಬಂದ ಹಿನ್ನೆಲೆಯಲ್ಲಿ ಅವರ ಅರ್ಹತೆ ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.
ರಾಜ್ಯಾದ್ಯಂತ ಪ್ರಸ್ತುತ ಒಟ್ಟು 83,11,493 ಫಲಾನುಭವಿಗಳು ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದಾರೆ. ಇವರ ಪೈಕಿ ಪ್ರಾಥಮಿಕ ತಪಾಸಣೆಯಲ್ಲಿ 23,13,664 ಫಲಾನುಭವಿಗಳ ಮಾಹಿತಿ ಸಂಶಯಾಸ್ಪದವಾಗಿದೆ. ಈ ಖಾತೆಗಳನ್ನು ಸಂಯೋಜನೆ ಮೊಬೈಲ್ ಆ್ಯಪ್ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ. ಸಂದೇಹವೆಂದು ಗುರುತಿಸಿದ ಖಾತೆಗಳ ಸಂಬಂಧ ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳದಲ್ಲೇ ಪರಿಶೀಲನೆ ನಡೆಸಿ ಅರ್ಹರೆಂದು ವರದಿ ಮಾಡಿದ 3,35,610 ಫಲಾನುಭವಿಗಳಿಗೆ ಮೇ ತಿಂಗಳವರೆಗಿನ ಪಿಂಚಣಿ ಪಾವತಿಸಲಾಗಿದೆ. ಅದೇ ರೀತಿ ಒಟ್ಟು 63,04,554 ಅರ್ಹ ಫಲಾನುಭವಿಗಳಿಗೆ ಪಿಂಚಣಿ ಪಾವತಿಸಲಾಗಿದೆ.
ಮಂಜೂರಾತಿ ಸಂದರ್ಭದಲ್ಲಿ ವಯಸ್ಸಿನ ದೃಢೀಕರಣ ಬಗ್ಗೆ ತಪ್ಪು ಮಾಹಿತಿ, ನಕಲಿ ದಾಖಲೆ ನೀಡಿ ಕಾನೂನುಬಾಹಿರವಾಗಿ ಪಿಂಚಣಿ ಪಡೆಯುತ್ತಿದ್ದ 91,152 ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡಲಾಗಿದ್ದು, ಅವರ ಪಿಂಚಣಿಯನ್ನು ರದ್ದು ಪಡಿಸಲು ತೀರ್ಮಾನಿಸಲಾಗಿದೆ. ಗ್ರಾಮ ಆಡಳಿತ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಯಾವುದೇ ಅಧಿಕೃತ ದಾಖಲೆ ಹಾಜರುಪಡಿಸಲು ವಿಫಲರಾದ ಮತ್ತು ವಿಳಾಸದಲ್ಲಿ ಇಲ್ಲದ, ಆದಾಯ ಪ್ರಮಾಣ ಪತ್ರ ಸಲ್ಲಿಸದ ಒಟ್ಟು 16,42,303 ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪಿಂಚಣಿ ಸ್ಥಗಿತವಾದ ಫಲಾನುಭವಿಗಳಿಗೆ ಕಂದಾಯ ಇಲಾಖೆ ಸೂಕ್ತ ತಿಳಿವಳಿಕೆ ಪತ್ರ ನೀಡಲು ಆದೇಶಿಸಿದೆ. ಸಂಬಂಧಿಸಿದ ತಹಶೀಲ್ದಾರರ ಮೂಲಕ ಅವರಿಗೆ ನೋಟಿಸ್ ನೀಡಿ ತಮ್ಮ ಅರ್ಹತಾ ದಾಖಲೆ ಸಲ್ಲಿಸಲು 30 ದಿನ ಕಾಲಾವಕಾಶ ಕಲ್ಪಿಸಲಾಗಿದೆ.

