ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲಿನಲ್ಲಿ ಮತ್ತೆ ಸಮಸ್ಯೆ ಉಂಟಾಗಿದೆ. ಕಬ್ಬನ್ ಪಾರ್ಕ್ ಸ್ಟೇಷನ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಮೆಟ್ರೋ ಮತ್ತೆ ಕೆಟ್ಟು ನಿಂತಿದೆ.
ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಮೆಟ್ರೋ ಬಾಗಿಲು ಲಾಕ್ ಆಗದೆ ಮೆಟ್ರೋ ರೈಲು ನಿಂತಲ್ಲೇ ನಿಂತಿದೆ. ಬಿಎಂಆರ್‌ಸಿಎಲ್ ಸಿಬ್ಬಂದಿ ಸಮಸ್ಯೆಯನ್ನು ಸರಿಪಡಿಸತೊಡಗಿದ್ದಾರೆ. ಮೆಟ್ರೋ ರೈಲು ನಿಂತಿದ್ದರಿಂದ ಪ್ರಯಾಣಿಕರು ಮತ್ತೆ ತೊಂದರೆ ಅನುಭವಿಸುವಂತಾಗಿದೆ.
ಜೂನ್ 23ರಂದು ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಇದರಿಂದಾಗಿ ಪ್ರಯಾಣಿಕರು ಪರದಾಟ ನಡೆಸಿದ್ದರು. ಸತತ ಒಂಬತ್ತು ಗಂಟೆ ಕಾಲ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತಾಂತ್ರಿಕ ದೋಷವನ್ನು ಸರಿಪಡಿಸಿದ್ದರು. ಜೂನ್ 24ರ ಮುಂಜಾನೆ 5 ಗಂಟೆಗೆ ಮೆಟ್ರೋ ಸಂಚಾರ ಎಂದಿನಂತೆ ಆರಂಭವಾಗಿತ್ತು. ಇದೀಗ ಮತ್ತೆ ಅದೇ ರೀತಿಯ ಪರಿಸ್ಥಿತಿ ಎದುರಾಗಿದೆ. ಬಾಗಿಲು ಲಾಕ್ ಆಗದೆ ಮೆಟ್ರೋ ನಿಂತಲ್ಲೇ ನಿಂತಿದೆ.
ಇದೀಗ ಬಂದ ಮಾಹಿತಿಯಂತೆ ಬಿಎಂಆರ್ಸಿಎಲ್ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ ತಾಂತ್ರಿಕದ ದೋಷ ಸರಿಪಡಿಸಿದ್ದು, ಕೆಲ ಸಮಯದ ನಂತರ ಮೆಟ್ರೋ ರೈಲು ಸಂಚಾರ ಪುನಾರಂಭವಾಗಿದೆ.

