ದಾವಣಗೆರೆ: ಪಾಕಿಸ್ತಾನ ಉಗ್ರ ಸಂಘಟನೆಗಳ ಜೊತೆ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಶಂಕಿತ ಉಗ್ರ ಸುಹೇಲ್ (20)ಗೆ ದಾವಣಗೆರೆ ಜಿಲ್ಲೆಯ ಹರಿಹರ ಜೆಎಂಎಫ್‌ಸಿ ಕೋರ್ಟ್ 10 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ.
ಶಂಕಿತ ಉಗ್ರ ಸುಹೇಲ್ನನ್ನು ಬಂಧಿಸಿದ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದರು. ನಂತರ ಕೋರ್ಟ್ ನಿನ್ನೆ 1 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ ಹಿನ್ನೆಲೆ ಕೋರ್ಟ್ 10 ದಿನ ಪೊಲೀಸ್ ವಶಕ್ಕೆ ನೀಡಿದೆ.
ಹರಿಹರ ನಗರದಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಸುಹೇಲ್, ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆಂದು ಬಂದಿದ್ದನೆಂದು ತಿಳಿದುಬಂದಿದೆ. ಇನ್‌ಸ್ಟಾಗ್ರಾಂ ಮೂಲಕ ಪಾಕಿಸ್ತಾನ ಮೂಲದ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾನೆ ಎಂಬ ಶಂಕೆಯ ಮೇಲೆ ಆತನನ್ನು ಬಂಧಿಸಲಾಗಿದೆ.
ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಹಾಗೂ ದಾವಣಗೆರೆ ಗ್ರಾಮಾಂತರ ಡಿವೈಎಸ್‌ಪಿ ಬಸವರಾಜ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಸುಹೇಲ್‌ನನ್ನು ವಶಕ್ಕೆ ಪಡೆದಿದೆ. ಇದೇ ಪ್ರಕರಣದ ಭಾಗವಾಗಿ ತಿಂಗಳ ಹಿಂದಷ್ಟೇ ತುಮಕೂರಿನಲ್ಲಿ ದಾವಣಗೆರೆ ಮೂಲದ ಇಬ್ಬರು ಶಂಕಿತ ಉಗ್ರರಾದ ಜಮೀರ್ ಖಾನ್ ಹಾಗೂ ಅಲ್ಲಾಭಕ್ಷ ಅವರನ್ನು ಬಂಧಿಸಲಾಗಿತ್ತು. ಈ ತನಿಖೆಯ ಮುಂದುವರಿದ ಭಾಗವಾಗಿ ಈಗ ಮತ್ತೊಬ್ಬ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

