ಬೆಂಗಳೂರು: ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಎನ್ ಡಿಎ ಸಂಸದರು ಸಂಸತ್ ನಲ್ಲಿಯಾಗಲಿ, ಕೇಂದ್ರ ಸರ್ಕಾರದ ಬಳಿಯಾಗಲಿ ಒಮ್ಮೆಯಾದರೂ ಮಾತನಾಡಿದ್ದಾರಾ? ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನ 9 ಸಂಸದರು ಮಾತನಾಡಿದ್ದಾರಾ? ಎಂದು ತಿರುಗೇಟು ನೀಡಿದ್ದಾರೆ.
ಮೇಕೆದಾಟು ವಿಚಾರವಾಗಿ ರಾಜ್ಯಸಭೆ ವಿಅಪ್ಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿದ್ದಾರಾ? ಒಂದೇ ಒಂದು ದಿನ ಕೂಡ ಅವರು ಮಾತನಾಡಿಲ್ಲ. ವಿಪಕ್ಷ ನಾಯಕರು ಮಾತನಾಡಿದ್ದಾರಾ? ಎನ್ ಡಿಎ ಸಂಸದರೇ ಮಾತನಾಡಬೇಕೆಂದಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಮೇಕೆದಾಟು ಯೋಜನೆಗೆ ತಮಿಳುನಾಡು ನಿರಂತರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿರುವುದಕ್ಕೆ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರ ಮತ್ತು ಸುತ್ತಮುತ್ತ ಕುಡಿಯುವ ನೀರಿಗಾಗಿ ಮಾಡಲಾಗುತ್ತಿರುವ ಮೇಕೆದಾಟು ಯೋಜನೆಗೆ ತಮಿಳುನಾಡು ಸಹಮತ ಕೊಡಬೇಕು. ರಾಜಕೀಯ, ಪ್ರತಿಷ್ಠೆಗಾಗಿ ಅಲ್ಲಿನ ಪಕ್ಷಗಳು ದಬ್ಬಾಳಿಕೆ ಮಾಡಬಾರದು. ಈ ಕ್ಯಾತೆ 50 ವರ್ಷಗಳ ಹಳೆಯ ಸಮಸ್ಯೆಯಾಗಿದೆ. ಉತ್ತಮ ಮಳೆಯಾದಾಗ ಕರ್ನಾಟಕವು ನ್ಯಾಯಮಂಡಳಿ ಆದೇಶಕ್ಕಿಂತಲೂ ಎರಡು ಪಟ್ಟು ಹೆಚ್ಚು ನೀರನ್ನು ಬಿಡುಗಡೆ ಮಾಡಿದೆ. ಆದರೆ ನಮ್ಮಲ್ಲಿಯೇ ಜಲಾಶಯಗಳು ಭರ್ತಿಯಾಗದಿದ್ದಾಗಲೂ ನೀರಿಗಾಗಿ ಒತ್ತಾಯಿಸುವುದು ಸೂಕ್ತವಲ್ಲ ಎಂದು ತಿಳಿಸಿದರು.

