HomeLatest Newsತಿಂಗಳಿಗೆ ₹1.46 ಲಕ್ಷ ಸಂಬಳ ಪಡೆದು ಪತ್ನಿಗೆ ₹15 ಸಾವಿರ ಕೊಡಲು ಆಗುವುದಿಲ್ಲವೇ?" – ಸಾಫ್ಟ್‌ವೇರ್...

ತಿಂಗಳಿಗೆ ₹1.46 ಲಕ್ಷ ಸಂಬಳ ಪಡೆದು ಪತ್ನಿಗೆ ₹15 ಸಾವಿರ ಕೊಡಲು ಆಗುವುದಿಲ್ಲವೇ?” – ಸಾಫ್ಟ್‌ವೇರ್ ಎಂಜಿನಿಯರ್‌ಗೆ ಸುಪ್ರೀಂಕೋರ್ಟ್ ತರಾಟೆ

ನವದೆಹಲಿ: ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಪತ್ನಿಗೆ ಮಧ್ಯಂತರ ಭರಣಪೋಷಣೆ ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್‌ಗೆ ತೀವ್ರ ತರಾಟೆ ತೆಗೆದುಕೊಂಡಿದೆ. ತಿಂಗಳಿಗೆ ಸುಮಾರು ₹1.46 ಲಕ್ಷ ಸಂಬಳ ಪಡೆಯುತ್ತಿರುವ ವ್ಯಕ್ತಿ, ಪತ್ನಿಗೆ ಕೇವಲ ₹15 ಸಾವಿರ ಮಧ್ಯಂತರ ಭರಣಪೋಷಣೆಯನ್ನೂ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಗಳ ಮೆಟ್ಟಿಲೇರಿರುವುದನ್ನು ನ್ಯಾಯಪೀಠ ಗಂಭೀರವಾಗಿ ಪ್ರಶ್ನಿಸಿದೆ.

“ವಕೀಲರ ಶುಲ್ಕಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ ಸುಪ್ರೀಂ ಕೋರ್ಟ್‌ವರೆಗೆ ಬರಲು ಸಾಧ್ಯವಾಗುತ್ತದೆ. ಆದರೆ ಪತ್ನಿಗೆ ₹15 ಸಾವಿರ ನೀಡಲು ಸಾಧ್ಯವಾಗುವುದಿಲ್ಲವೇ? ನಿಮ್ಮ ಆದಾಯಕ್ಕೆ ಹೋಲಿಸಿದರೆ ಈ ಮೊತ್ತ ತುಂಬಾ ಕಡಿಮೆ. ನಾವು ಬಯಸಿದರೆ ಈ ಭರಣಪೋಷಣೆಯ ಮೊತ್ತವನ್ನು ಇನ್ನಷ್ಟು ಹೆಚ್ಚಿಸಬಹುದು” ಎಂದು ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿ, ಇಂಜಿನಿಯರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದರು.

ಸಂಗಾರೆಡ್ಡಿ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್‌ವರೆಗೆ

ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ತೆಲಂಗಾಣದ ದಂಪತಿ 2023ರಲ್ಲಿ ಸಂಗಾರೆಡ್ಡಿಯ ಹೆಚ್ಚುವರಿ ಜೂನಿಯರ್ ಸಿವಿಲ್ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಪತ್ನಿಗೆ ತಿಂಗಳಿಗೆ ₹18,000 ಮಧ್ಯಂತರ ಭರಣಪೋಷಣೆ ನೀಡುವಂತೆ ನ್ಯಾಯಾಲಯ ಪತಿಗೆ ಆದೇಶಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ, ಬಿ.ಟೆಕ್ ಪದವೀಧರಳಾದ ತನ್ನ ಪತ್ನಿ ಉದ್ಯೋಗದಿಂದ ತಿಂಗಳಿಗೆ ₹15,000 ಆದಾಯ ಗಳಿಸುತ್ತಿದ್ದು, ಸ್ವತಃ ಜೀವನ ನಡೆಸಲು ಸಮರ್ಥಳಾಗಿದ್ದಾಳೆ ಎಂದು ಪತಿ ವಾದಿಸಿದ್ದ. ಜೊತೆಗೆ ತನ್ನ ವೃದ್ಧ ಪೋಷಕರು ಹಾಗೂ ಸಹೋದರನ ಜವಾಬ್ದಾರಿಯೂ ತನ್ನ ಮೇಲಿದೆ ಎಂದು ಹೇಳಿ, ಭರಣಪೋಷಣೆಯ ಮೊತ್ತ ಕಡಿಮೆ ಮಾಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

ಈ ವಾದಗಳನ್ನು ಪರಿಗಣಿಸಿದ ಹೈಕೋರ್ಟ್, ಕಳೆದ ವರ್ಷದ ನವೆಂಬರ್ 25ರಂದು ಮಧ್ಯಂತರ ಭರಣಪೋಷಣೆಯ ಮೊತ್ತವನ್ನು ₹18,000ರಿಂದ ₹15,000ಕ್ಕೆ ಇಳಿಸಿತ್ತು.

“ಅವಳು ಸಾಫ್ಟ್‌ವೇರ್ ಆಗಿರಲಿ, ಹಾರ್ಡ್‌ವೇರ್ ಆಗಿರಲಿ ನಮಗೆ ಸಂಬಂಧವಿಲ್ಲ”

ಹೈಕೋರ್ಟ್ ನಿಗದಿಪಡಿಸಿದ್ದ ₹15,000 ಮೊತ್ತವನ್ನೂ ಪ್ರಶ್ನಿಸಿ ಸಾಫ್ಟ್‌ವೇರ್ ಇಂಜಿನಿಯರ್ ಜೂನ್ 1ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ (SLP) ಸಲ್ಲಿಸಿದ್ದರು. ಈ ಅರ್ಜಿ ನ್ಯಾಯಮೂರ್ತಿಗಳಾದ ಜಸ್ಟಿಸ್ ಜೋಯ್ಮಾಲ್ಯ ಬಾಗ್ಚಿ ಮತ್ತು ಜಸ್ಟಿಸ್ ವಿ.ಎಂ. ಪಂಚೋಲಿ ಅವರಿದ್ದ ಪೀಠದ ಮುಂದೆ ವಿಚಾರಣೆಗೆ ಬಂದಿತು.

ವಿಚಾರಣೆ ವೇಳೆ ಪತ್ನಿಯೂ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಪತಿಯ ಪರ ವಕೀಲರು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “ಅವಳು ಸಾಫ್ಟ್‌ವೇರ್ ಕ್ಷೇತ್ರದಲ್ಲಿರಲಿ, ಹಾರ್ಡ್‌ವೇರ್ ಕ್ಷೇತ್ರದಲ್ಲಿರಲಿ, ಅದು ನಮಗೆ ಮುಖ್ಯವಲ್ಲ. ನಿಮ್ಮ ತಿಂಗಳ ಆದಾಯ ₹1.46 ಲಕ್ಷ. ಹೈಕೋರ್ಟ್ ಕೇವಲ ₹15 ಸಾವಿರ ಭರಣಪೋಷಣೆ ನಿಗದಿಪಡಿಸಿದೆ. ಅದನ್ನೂ ಪ್ರಶ್ನಿಸಿ ನೀವು ಇಲ್ಲಿ ಬಂದಿದ್ದೀರಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೈಕೋರ್ಟ್ ವ್ಯಾಪ್ತಿಯಲ್ಲಿ ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಅವಕಾಶ ನೀಡುವಂತೆ ಪತಿಯ ಪರ ವಕೀಲರು ಮನವಿ ಮಾಡಿದರೂ, ಸುಪ್ರೀಂ ಕೋರ್ಟ್ ಅದನ್ನು ತಿರಸ್ಕರಿಸಿತು.ಪತಿಯ ಆದಾಯವನ್ನು ಪರಿಗಣಿಸಿದರೆ ತಿಂಗಳಿಗೆ ₹15,000 ಮಧ್ಯಂತರ ಭರಣಪೋಷಣೆ ಅತೀ ಕಡಿಮೆ ಮೊತ್ತ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಭರಣಪೋಷಣೆ ವಿಷಯದಲ್ಲಿ ಅನಗತ್ಯವಾಗಿ ನ್ಯಾಯಾಲಯಗಳ ಸಮಯ ವ್ಯರ್ಥ ಮಾಡಬಾರದು ಎಂಬ ಸಂದೇಶವನ್ನೂ ನ್ಯಾಯಪೀಠ ಸ್ಪಷ್ಟಪಡಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular