ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಿಂದಾಗಿ ದೇಶಾದ್ಯಂತ ತೀವ್ರ ಆಕ್ರೋಶ ಹಾಗೂ ಸಂಚಲನ ಮೂಡಿಸಿದ್ದ ನೀಟ್-ಯುಜಿ ಮರುಪರೀಕ್ಷೆ (NEET-UG Re-Exam) ಜೂನ್ 21ರ ನಾಳೆ ಭಾನುವಾರ ದೇಶಾದ್ಯಂತ ಜರುಗಲಿದೆ. ಪರೀಕ್ಷೆಯಲ್ಲಿ ಮತ್ತೊಮ್ಮೆ ಯಾವುದೇ ಅಕ್ರಮ ಅಥವಾ ಪೇಪರ್ ಲೀಕ್ ಆಗದಂತೆ ತಡೆಯಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸಜ್ಜಾಗಿದೆ. ಇದರ ಭಾಗವಾಗಿ ಇಂದು (ಶನಿವಾರ) ದೇಶಾದ್ಯಂತ ಎನ್ಟಿಎ ಹೈಲೆವೆಲ್ ಮೆಗಾ ಮಾಕ್ ಡ್ರಿಲ್ (Mega Mock Drill) ನಡೆಸುತ್ತಿದೆ.
ಮರುಪರೀಕ್ಷೆಗೆ ಇದುವರೆಗೂ ದೇಶದ ಇತಿಹಾಸದಲ್ಲೇ ನೋಡಿರದ ರೀತಿಯ ಅತ್ಯುನ್ನತ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳು ಆಗದಂತೆ ನೋಡಿಕೊಳ್ಳಲು ಇಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಪೂರ್ಣ ಪ್ರಮಾಣದ ಅಣುಕು ಕಾರ್ಯಾಚರಣೆ ನಡೆಯಲಿದೆ. ಪ್ರಶ್ನೆಪತ್ರಿಕೆ ವಿತರಣೆ, ಉತ್ತರ ಪತ್ರಿಕೆ ಸಂಗ್ರಹ ಮತ್ತು ಸಾಗಣೆ ಸೇರಿದಂತೆ ಪ್ರತಿಯೊಂದು ಹಂತವನ್ನೂ ಈ ಮಾಕ್ ಡ್ರಿಲ್ ಮೂಲಕ ಕ್ರಾಸ್ ಚೆಕ್ ಮಾಡಲಾಗುತ್ತಿದೆ
5,500ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪರೀಕ್ಷೆ
ದೇಶದ 551 ನಗರಗಳು ಹಾಗೂ 14 ಅಂತರರಾಷ್ಟ್ರೀಯ ಸ್ಥಳಗಳಲ್ಲಿ 5,500ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ NEET-UG ಮರುಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ಭದ್ರತೆಗಾಗಿ ಜಿಲ್ಲಾಡಳಿತ, ರಾಜ್ಯ ಪೊಲೀಸ್ ಹಾಗೂ ಕೇಂದ್ರ ಭದ್ರತಾ ಪಡೆಗಳನ್ನು ಒಳಗೊಂಡ ಮೂರು ಹಂತದ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ.
2.5 ಲಕ್ಷ ಪೊಲೀಸ್ ಸಿಬ್ಬಂದಿ ನಿಯೋಜನೆ
ಪರೀಕ್ಷಾ ಕೇಂದ್ರಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅಭ್ಯರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುಮಾರು 2.5 ಲಕ್ಷ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ, ಪ್ರಶ್ನೆಪತ್ರಿಕೆಗಳ ಸಾಗಣೆ ಮತ್ತು ಉತ್ತರ ಪತ್ರಿಕೆಗಳನ್ನು ಸುರಕ್ಷಿತವಾಗಿ ವಾಪಸ್ ತರಲು 15,000 ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
1.5 ಲಕ್ಷ ಸಿಸಿಟಿವಿ, 15 ಸಾವಿರ ಜಾಮರ್
ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡಲು ದೇಶಾದ್ಯಂತ ಸುಮಾರು 1.5 ಲಕ್ಷ ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಲಾಗಿದೆ. ಜೊತೆಗೆ, ಅಕ್ರಮ ಸಂವಹನ ತಡೆಯಲು 15,000 ಸಿಗ್ನಲ್ ಜಾಮರ್ಗಳನ್ನು ಸ್ಥಾಪಿಸಲಾಗಿದೆ. ಎನ್ಟಿಎ ಕೇಂದ್ರ ಕಚೇರಿ ಹಾಗೂ ವಿವಿಧ ಕಂಟ್ರೋಲ್ ರೂಮ್ಗಳಿಂದ ಪರೀಕ್ಷಾ ಪ್ರಕ್ರಿಯೆಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ.
22.8 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಅಧಿಕಾರಿಗಳ ಮಾಹಿತಿ ಪ್ರಕಾರ, ಈ ವರ್ಷದ NEET-UG ಪರೀಕ್ಷೆಗೆ ಸುಮಾರು 22.8 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 18.5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಈಗಾಗಲೇ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಸುಮಾರು 3.5 ಲಕ್ಷ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರ ಅಥವಾ ನಗರ ಬದಲಾವಣೆಗೆ ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಗಳಲ್ಲಿ ಒಂದಾದ NEET-UG ಮರುಪರೀಕ್ಷೆಯನ್ನು ಈ ಬಾರಿ ಅತ್ಯಂತ ಕಟ್ಟುನಿಟ್ಟಿನ ಭದ್ರತಾ ಕ್ರಮಗಳ ನಡುವೆ ನಡೆಸಲು ಎನ್ಟಿಎ ಸಿದ್ಧತೆ ನಡೆಸಿದೆ.a

