ಬೆಂಗಳೂರು ನಮ್ಮ ಮೆಟ್ರೋದಲ್ಲಿ ಶುಕ್ರವಾರ ಆತಂಕದ ಘಟನೆ ನಡೆದಿದೆ. ಪ್ರಯಾಣಿಕರ ದಟ್ಟಣೆಯಿಂದ ಮೆಟ್ರೋ ರೈಲಿನ ಬಾಗಿಲಿನಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಹಾಗೂ ಸಹಪ್ರಯಾಣಿಕರು ಸಮಯಕ್ಕೆ ಸರಿಯಾಗಿ ರಕ್ಷಿಸಿದ್ದು, ದೊಡ್ಡ ಅನಾಹುತವೊಂದು ತಪ್ಪಿದೆ.
ಬೆಂಗಳೂರು ನಗರದ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ಈ ಘಟನೆ ನಡೆದಿದೆ. ಪ್ಲಾಟ್‌ಫಾರ್ಮ್‌ನಿಂದ ಹೊರಡುತ್ತಿದ್ದ ಮೆಟ್ರೋ ರೈಲಿನಿಂದ ಇಳಿಯಲು ಯತ್ನಿಸಿದ ಪ್ರಯಾಣಿಕನೊಬ್ಬ ದಟ್ಟಣೆಯ ಕಾರಣದಿಂದ ಸಮಯಕ್ಕೆ ಇಳಿಯಲು ಸಾಧ್ಯವಾಗಲಿಲ್ಲ. ಇದೇ ವೇಳೆ ರೈಲಿನ ಬಾಗಿಲುಗಳು ಮುಚ್ಚಿಕೊಂಡು ರೈಲು ಚಲನೆ ಆರಂಭಿಸಿತು.
ಬಾಗಿಲಿನ ಮಧ್ಯೆ ಸಿಲುಕಿದ್ದ ಪ್ರಯಾಣಿಕನನ್ನು ಗಮನಿಸಿದ ಸಹಪ್ರಯಾಣಿಕರು ಹಾಗೂ ಮೆಟ್ರೋ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾದರು. ಕಪೋಲೇಶ್ವರ ನಿಲ್ದಾಣದ ಸಮೀಪ ಆತನನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಲಾಯಿತು.
ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಎಚ್ಚರಿಕೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಕ್ಷಣೆ ಕಾರ್ಯಾಚರಣೆಯ ಬಳಿಕ ಪ್ರಯಾಣಿಕ ಸುರಕ್ಷಿತವಾಗಿ ರೈಲಿನಿಂದ ಇಳಿದಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ. ಘಟನೆಯಿಂದ ಮೆಟ್ರೋ ಸಂಚಾರದಲ್ಲಿ ಸ್ವಲ್ಪ ಸಮಯ ಅಡಚಣೆ ಉಂಟಾಗಿ ಸುಮಾರು ಮೂರು ಟ್ರಿಪ್‌ಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಕಂಡುಬಂದಿದೆ. ಬಳಿಕ ರೈಲು ಸಂಚಾರವನ್ನು ಸಾಮಾನ್ಯ ಸ್ಥಿತಿಗೆ ತರಲಾಯಿತು.

