ಬಿಹಾರದ ಪಾಟ್ನಾದ ದಿಘಾ ಪ್ರದೇಶದಲ್ಲಿರುವ ಆಭರಣ ಅಂಗಡಿಯಲ್ಲಿ ನಡೆದ ದರೋಡೆ ಯತ್ನದ ಘಟನೆ ಸಿಸಿಟಿವಿ ದೃಶ್ಯಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ರಾಹಕರಂತೆ ನಟಿಸಿ ಬಂದಿದ್ದ ಇಬ್ಬರು ಯುವತಿಯರು ಪೆಪ್ಪರ್ ಸ್ಪ್ರೇ ಬಳಸಿ ಚಿನ್ನದ ಆಭರಣ ಕಳವು ಮಾಡಲು ಯತ್ನಿಸಿದರೂ, ಅಂಗಡಿ ಮಾಲೀಕರ ಸಮಯೋಚಿತ ಕ್ರಮದಿಂದ ಅವರ ಸಂಚು ವಿಫಲವಾಗಿದೆ.
ಕುರ್ಜಿ ಸೇತುವೆ ಸಮೀಪದ ಮಾ ವೈಷ್ಣೋ ಜುವೆಲ್ಲರ್ಸ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಪ್ಲಸ್-ಟು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಮತ್ತು ಒಂದೇ ಕೋಚಿಂಗ್ ಕೇಂದ್ರದಲ್ಲಿ ಓದುತ್ತಿದ್ದ ಇಬ್ಬರು ಯುವತಿಯರು ಗ್ರಾಹಕರಂತೆ ಅಂಗಡಿಗೆ ಪ್ರವೇಶಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನದ ಕಿವಿಯೋಲೆ ತೋರಿಸುವಂತೆ ಬೇಡಿಕೆ
ಅಂಗಡಿ ಮಾಲೀಕ ರಾಜೇಶ್ ಕುಮಾರ್ ಅವರು ಮಹಿಳಾ ಗ್ರಾಹಕರೊಬ್ಬರಿಗೆ ಆಭರಣ ತೋರಿಸುತ್ತಿದ್ದ ವೇಳೆ ಯುವತಿಯರು ಅಂಗಡಿಗೆ ಬಂದಿದ್ದಾರೆ. ಅವರು ಚಿನ್ನದ ಕಿವಿಯೋಲೆಗಳನ್ನು ನೋಡಲು ಕೇಳಿದ್ದು, ರಾಜೇಶ್ ಅವುಗಳನ್ನು ಕೌಂಟರ್ ಮೇಲೆ ಇಟ್ಟಿದ್ದಾರೆ.ನಂತರ ಉಂಗುರವನ್ನೂ ತೋರಿಸುವಂತೆ ಕೇಳಿ ಅಂಗಡಿ ಮಾಲೀಕರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸಿದ್ದಾರೆ. ಇದೇ ವೇಳೆ ಒಬ್ಬ ಯುವತಿ ತನ್ನ ಬ್ಯಾಗ್‌ನಿಂದ ಸ್ಪ್ರೇ ತೆಗೆದು ರಾಜೇಶ್ ಅವರ ಮುಖಕ್ಕೆ ಸಿಂಪಡಿಸಿದ್ದಾಳೆ ಎನ್ನಲಾಗಿದೆ.ಈ ಸ್ಪ್ರೇ ಪರಿಣಾಮದಿಂದ ರಾಜೇಶ್ ಹಾಗೂ ಅಲ್ಲಿದ್ದ ಮಹಿಳಾ ಗ್ರಾಹಕರಿಗೆ ಉಸಿರಾಟದ ತೊಂದರೆ ಉಂಟಾಗಿದೆ.
ಅಂಗಡಿ ಮಾಲೀಕರ ಸಮಯಪ್ರಜ್ಞೆಯಿಂದ ತಪ್ಪಿದ ದರೋಡೆ
ಹಠಾತ್ ದಾಳಿಯ ನಡುವೆಯೂ ರಾಜೇಶ್ ಕುಮಾರ್ ಚಿನ್ನದ ಆಭರಣಗಳನ್ನು ಸುರಕ್ಷಿತಗೊಳಿಸಿದ್ದಾರೆ. ಬಳಿಕ ಕೌಂಟರ್ ದಾಟಿ ಹೊರಗೆ ಬಂದು ಕೂಗಾಟ ನಡೆಸಿ, ಆರೋಪಿಗಳು ತಪ್ಪಿಸಿಕೊಳ್ಳದಂತೆ ಅಂಗಡಿಯ ಶಟರ್ ಅನ್ನು ತಕ್ಷಣವೇ ಕೆಳಗಿಳಿಸಿದ್ದಾರೆ.ಈ ಗಲಾಟೆಯ ವೇಳೆ ಅಂಗಡಿಯ ಮುಂಭಾಗದ ಗಾಜು ಒಡೆದಿದೆ. ಒಬ್ಬ ಯುವತಿ ಪರಾರಿಯಾಗಲು ಯಶಸ್ವಿಯಾದರೆ, ಮತ್ತೊಬ್ಬಳು ಅಂಗಡಿಯೊಳಗೇ ಸಿಕ್ಕಿಬಿದ್ದಿದ್ದಾಳೆ.ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಪಡೆದ ದಿಘಾ ಪೊಲೀಸರು ಆಗಮಿಸಿ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೋರ್ವ ಆರೋಪಿಯೂ ಬಂಧನ
ಬಂಧಿತ ಯುವತಿಯಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಪೊಲೀಸರು ರಾತ್ರಿ ವೇಳೆ ದಾಳಿ ನಡೆಸಿ ಮತ್ತೊಬ್ಬ ಯುವತಿಯನ್ನೂ ಬಂಧಿಸಿದ್ದಾರೆ.ವಿಚಾರಣೆ ವೇಳೆ ಇಬ್ಬರು ಯುವತಿಯರು ಆರ್ಥಿಕ ಸಂಕಷ್ಟದ ಕಾರಣದಿಂದ ದರೋಡೆ ಮಾಡಲು ಯೋಜನೆ ರೂಪಿಸಿದ್ದಾಗಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತನಿಖೆ ಮುಂದುವರಿಕೆ
ಬಂಧಿತ ಯುವತಿಯರಲ್ಲಿ ಒಬ್ಬಳು ಕುರ್ಜಿ ಪ್ರದೇಶದವಳಾಗಿದ್ದು, ಮತ್ತೊಬ್ಬಳು ದಿಯಾರಾ ಪ್ರದೇಶದವಳಾಗಿದ್ದಾಳೆ. ಈ ದರೋಡೆ ಯತ್ನದ ಹಿಂದೆ ಯಾವುದೇ ಅಪರಾಧಿ ಜಾಲದ ಪ್ರೇರಣೆ ಅಥವಾ ಮಾರ್ಗದರ್ಶನ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ಆಶ್ಚರ್ಯ, ಹಾಸ್ಯ ಹಾಗೂ ಆತಂಕದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

