HomeKarnatakaಬೆಂಗಳೂರಿನ 27 ಆಹಾರ ಗೋದಾಮಿನ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಅಧಿಕಾರಿಗಳ ಕಳ್ಳಾಟ ಬಯಲು

ಬೆಂಗಳೂರಿನ 27 ಆಹಾರ ಗೋದಾಮಿನ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಅಧಿಕಾರಿಗಳ ಕಳ್ಳಾಟ ಬಯಲು

ಬೆಂಗಳೂರು: ಬೆಂಗಳೂರಿನ 27 ಸರ್ಕಾರಿ ಆಹಾರ ಗೋದಾಮಿನ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಪಡಿತರ ಅಕ್ಕಿ ಮತ್ತು ಆಹಾರ ಧಾನ್ಯಗಳ ವಿತರಣೆಯಲ್ಲಿ ನಡೆಯುತ್ತಿದ್ದ ಭಾರಿ ಅಕ್ರಮ ಹಾಗೂ ಕಳ್ಳಾಟವನ್ನು ಪತ್ತೆಹಚ್ಚಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹಾಗೂ ಉಪಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನ 22 ಹಾಗೂ ಬೆಂಗಳೂರು ಗ್ರಾಮಾಂತರದ 5 ಸೇರಿದಂತೆ ಒಟ್ಟು 27 ಕಡೆಗಳಲ್ಲಿ ಏಕಕಾಲಕ್ಕೆ ಆಹಾರ ಸರಬರಾಜು ನಿಗಮದ ಗೋದಾಮುಗಳ ಮೇಲೆ ದಾಳಿ ನಡೆಸಲಾಗಿದೆ.

ಶಾಂತಿನಗರದ ಗೋದಾಮಿನಲ್ಲಿ ಪರಿಶೀಲನೆ ನಡೆಸಿದಾಗ ದಾಖಲೆಗಳಿಗೂ ಅಲ್ಲಿನ ದಾಸ್ತಾನಿಗೂ ಭಾರಿ ವ್ಯತ್ಯಾಸ ಕಂಡುಬಂದಿದೆ. ಇಲ್ಲಿ 50 ಕೆಜಿಯ ಸುಮಾರು 1,130 ಅಕ್ಕಿ ಮೂಟೆಗಳಿಗೂ ನೀಡಿರುವ ಲೆಕ್ಕಕ್ಕೂ ಸಂಬಂಧವೇ ಇಲ್ಲ. ಈ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಯನ್ನು ಕೇಳಿದರೆ ಅವರ ಬಳಿ ಉತ್ತರವೂ ಇಲ್ಲ. ಅಷ್ಟೇ ಅಲ್ಲದೆ, ಗೋದಾಮಿನಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದ 5 ಜನ ಹಮಾಲಿ ಕಾರ್ಮಿಕರಿಗೆ ಯಾವುದೇ ಜೀವ ವಿಮೆ ಸೌಲಭ್ಯ ಕಲ್ಪಿಸಿಲ್ಲ ಎಂಬುದು ಬೆಳಕಿಗೆ ಬಂದಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕರ್ತವ್ಯಲೋಪ ಎಸಗಿರುವುದು ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ದಕ್ಷಿಣದ ಬೊಬ್ಬನಹಳ್ಳಿ ಗೋದಾಮಿನ ಮೇಲೆ ಲೋಕಾಯುಕ್ತ ದಾಳಿ ಮಾಡಿದ ವೇಳೆ ಉಸ್ತುವಾರಿ ಅಧಿಕಾರಿ ಅಚ್ಯುತ್ ಯಾವುದೇ ಮಾಹಿತಿ ನೀಡದೆ ಅನಧಿಕೃತವಾಗಿ ಗೈರುಹಾಜರಾಗಿದ್ದರು. ಸ್ಥಳದಲ್ಲಿದ್ದ ಮತ್ತೊಬ್ಬ ಸಿಬ್ಬಂದಿ ಶಿವಲಿಂಗಯ್ಯ ಸ್ವೀಕರಿಸಿದ ಅಕ್ಕಿ ಮೂಟೆಗಳ ಬಗ್ಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಇದೇ ವೇಳೆಗೆ ನಿಯಮಬಾಹಿರವಾಗಿ ಲಾರಿಯೊಂದಕ್ಕೆ 25 ಟನ್ ಅಕ್ಕಿ ಮೂಟೆಗಳನ್ನು ಲೋಡ್ ಮಾಡುತ್ತಿರುವುದು ಪತ್ತೆಯಾಗಿದೆ.

ಬಸವನಗುಡಿ ಗೋದಾಮಿನಲ್ಲಿ ಅಧಿಕಾರಿಗಳು ನೀಡಿದ ಲಿಖಿತ ಲೆಕ್ಕಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದ ಅಕ್ಕಿ ಮೂಟೆಗಳು ಇರುವುದು ಪತ್ತೆಯಾಗಿದೆ. ದಾಳಿಯ ವೇಳೆ ಅಧಿಕಾರಿಗಳ ಬಳಿ ಇದ್ದ ನಗದಿಗೆ ಸಂಬಂಧಿಸಿದಂತೆ ಯಾವುದೇ ಸರಿಯಾದ ದಾಖಲೆ ನೀಡಿಲ್ಲ. ಇದರೊಂದಿಗೆ ಗೋದಾಮಿನ ಹಮಾಲಿ ಕಾರ್ಮಿಕರಿಗೆ ಕನಿಷ್ಠ ಅಗತ್ಯಗಳಾದ ಜೀವ ವಿಮೆ, ಇ.ಎಸ್.ಐ ಹಾಗೂ ಪಿ.ಎಫ್ ಸೌಲಭ್ಯಗಳನ್ನು ನೀಡದೆ ವಂಚಿಸಿರುವುದು ಕಂಡುಬಂದಿದೆ.

ಹನುಮಂತನಗರದ ಗೋದಾಮಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ರಿಜಿಸ್ಟರ್ ಹಾಗೂ ದಾಸ್ತಾನು ಪರಿಶೀಲಿಸಿದಾಗ ದೊಡ್ಡ ಮಟ್ಟದ ವಂಚನೆ ಬೆಳಕಿಗೆ ಬಂದಿದೆ. ಸರ್ಕಾರಿ ದಾಖಲೆಗಳಲ್ಲಿ ಉಲ್ಲೇಖಿಸಲಾದ ಪ್ರಮಾಣದಲ್ಲಿ ಅಕ್ಕಿ, ರಾಗಿ ಮೂಟೆಗಳು ಇರಲಿಲ್ಲ. ಗೋಡೌನ್​ನಲ್ಲಿ ಪಡಿತರ ಧಾನ್ಯಗಳು ದುರಪಯೋಗಗೊಂದಡಿರುವುದು ದೃಢಪಟ್ಟಿದೆ. ಇಲ್ಲಿನ ಹಮಾಲಿ ಕಾರ್ಮಿಕರಿಗೂ ಜೀವ ವಿಮೆ, ಇ.ಎಸ್.ಐ ಹಾಗೂ ಪಿ.ಎಫ್ ಸೌಲಭ್ಯಗಳನ್ನು ಒದಗಿಸದೆ ಶೋಷಣೆ ಮಾಡಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular