HomeLatest Newsಕೆಐಎಡಿಬಿಯಲ್ಲಿ ಮಹತ್ವದ ಬದಲಾವಣೆ: ಭೂಸ್ವಾಧೀನದಿಂದ ಇ-ಖಾತಾವರೆಗೆ ಎಲ್ಲವೂ ಡಿಜಿಟಲ್!

ಕೆಐಎಡಿಬಿಯಲ್ಲಿ ಮಹತ್ವದ ಬದಲಾವಣೆ: ಭೂಸ್ವಾಧೀನದಿಂದ ಇ-ಖಾತಾವರೆಗೆ ಎಲ್ಲವೂ ಡಿಜಿಟಲ್!

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿಯ (ಕೆಐಎಡಿಬಿ) ಮೂಲಕ ನಡೆಯುವ ಭೂಸ್ವಾಧೀನ ಮತ್ತು ನಿವೇಶನ ಮಂಜೂರಾತಿಯವರೆಗಿನ ಪ್ರತಿಯೊಂದು ಪ್ರಕ್ರಿಯೆಯೂ ಇನ್ನು ಮುಂದೆ ಡಿಜಿಟಲ್ ರೂಪದಲ್ಲಿ ನಡೆಯಲಿದೆ. ಇದರಿಂದ ರೈತರು ಮತ್ತು ಉದ್ಯಮಿಗಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿದೆ.

ಈ ಸಂಬಂಧದ ಕೆಲಸಗಳನ್ನು ಮುಂದಿನ ನೂರು ದಿನಗಳಲ್ಲಿ ಮುಗಿಸಬೇಕು ಎಂದು ಬೃಹತ್ ಕೈಗಾರಿಕಾ ಸಚಿವ M. B. Patil ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

100 ದಿನಗಳ ಗಡುವು: ಇಲಾಖೆಗೆ ಸ್ಪಷ್ಟ ನಿರ್ದೇಶನ

ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅವರು ಖನಿಜ ಭವನದಲ್ಲಿ ಬುಧವಾರ ತಮ್ಮ ಇಲಾಖೆಯ ಎರಡನೇ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ ಅವರು ನೂರು ದಿನಗಳಲ್ಲಿ ಮಾಡಬೇಕಾದ ಕೆಲಸಗಳೇನು ಎಂದು ಸ್ಪಷ್ಟಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಭೆಯ ಬಗ್ಗೆ ಮಾತನಾಡಿದ ಅವರು, ಸರ್ಕಾರದ ಇ-ಗವರ್ನೆನ್ಸ್ ಇಲಾಖೆಯು ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ. ಇದರ ಅಡಿಯಲ್ಲೇ ಈಗ ರಾಜ್ಯದ ಹಳೆಯ ಮತ್ತು ಹೊಸ ಕೈಗಾರಿಕಾ ಪ್ರದೇಶಗಳಲ್ಲಿನ ನಿವೇಶನಗಳ ಪ್ರತಿಯೊಂದು ವಿವರವನ್ನೂ ಡಿಜಿಟಲೀಕರಣ ಮಾಡಲಾಗುವುದು.

ಇದರಲ್ಲಿ ಪ್ರತೀ ನಿವೇಶನಕ್ಕೆ ಸಂಬಂಧಿಸಿದಂತೆ ಒಟ್ಟು 77 ಕಾಲಂಗಳಲ್ಲಿ ಮಾಹಿತಿ ಇರಲಿದೆ ಎಂದು ತಿಳಿಸಿದ್ದಾರೆ.

ಒಂದು ಕ್ಲಿಕ್‌ನಲ್ಲಿ 77 ರೀತಿಯ ಮಾಹಿತಿ ಲಭ್ಯ

ಕೈಗಾರಿಕಾ ನಿವೇಶನದ ಮಂಜೂರಾತಿ, ಅದರ ಸ್ಥಿತಿಗತಿ, ಅಲ್ಲಿರುವ ಕೈಗಾರಿಕೆ, ಮಾಡಿರುವ ಹೂಡಿಕೆ, ಆಗಿರುವ ಉದ್ಯೋಗಸೃಷ್ಟಿ, ಸಂತ್ರಸ್ತ ರೈತರಿಗೆ ಕೊಟ್ಟಿರುವ ಪರಿಹಾರ, ಕೋರ್ಟ್ ಕೇಸಿನ ವಿವರಗಳು, ಹೂಡಿಕೆದಾರರಿಗೆ ಕೊಟ್ಟಿರುವ ಕಾಲಾವಕಾಶ ಮುಂತಾದ ವಿವರಗಳು ಡಿಜಿಟಲೀಕರಣದಿಂದ ಕ್ಷಣಾರ್ಧದಲ್ಲಿ ಸಿಗಲಿವೆ.

ಬಹಳ ಹಿಂದಿನ ದಾಖಲೆಗಳನ್ನು ಕಾಪಾಡುವ ಕಷ್ಟವೂ ಇದರಿಂದ ತಪ್ಪಲಿದ್ದು, ಪ್ರತಿಯೊಂದು ಮಾಹಿತಿಯೂ ಶಾಶ್ವತವಾಗಿ ಉಳಿಯಲಿದೆ ಎಂದು ಅವರು ವಿವರಿಸಿದ್ದಾರೆ.

ಡಬಲ್ ಪರಿಹಾರ, ದಾಖಲೆ ಸಮಸ್ಯೆಗೆ ಬ್ರೇಕ್

ಹಿಂದೆ ಎಷ್ಟೋ ಪ್ರಕರಣಗಳಲ್ಲಿ ದಾಖಲೆಗಳು ಸರಿಯಾಗಿಲ್ಲದೆ ಒಂದೊಂದೇ ಜಮೀನಿಗೆ ಎರಡೆರಡು ಬಾರಿ ಪರಿಹಾರ ಕೊಟ್ಟಿರುವ ಪ್ರಕರಣಗಳು ಕೂಡ ಸಂಭವಿಸಿವೆ.

ಹೊಸ ವ್ಯವಸ್ಥೆಯಿಂದ ಸಂಪೂರ್ಣ ಪಾರದರ್ಶಕತೆ ಬರಲಿದ್ದು, ಹೂಡಿಕೆದಾರರು ತಾವು ಇರುವಲ್ಲಿಂದಲೇ ತಮಗೆ ಬೇಕಾದ ಮಾಹಿತಿ ಪಡೆದುಕೊಳ್ಳಬಹುದು. ಇಲ್ಲಿ ಮಧ್ಯವರ್ತಿಗಳ ಕಾಟ ಇರುವುದಿಲ್ಲ ಎಂದು ಅವರು ನುಡಿದಿದ್ದಾರೆ.

224 ಕೈಗಾರಿಕಾ ಪ್ರದೇಶಗಳ ಮಾಹಿತಿ ಡಿಜಿಟಲ್ ಭದ್ರತೆಗೆ

ರಾಜ್ಯದಲ್ಲಿ ಈಗ 224 ಕೈಗಾರಿಕಾ ಪ್ರದೇಶಗಳಿವೆ. ಇಲ್ಲಿರುವ ಸಾವಿರಾರು ನಿವೇಶನಗಳ ಸ್ಥಿತಿಗತಿ ಎಲ್ಲವೂ ಸದ್ಯದಲ್ಲೇ ಸ್ಕ್ಯಾನ್ ಆಗಿ, ಸುರಕ್ಷಿತವಾಗಲಿದೆ.

ಕೈಗಾರಿಕಾ ಇಲಾಖೆಯಲ್ಲಿ ಜನಸ್ನೇಹಿ ಸುಧಾರಣೆಗಳನ್ನು ತರಬೇಕು ಎನ್ನುವ ಉದ್ದೇಶದಿಂದ ಡಿಜಿಟಲೀಕರಣವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಪಾಟೀಲ ಹೇಳಿದ್ದಾರೆ.

ಒಂದು ತಿಂಗಳಲ್ಲಿ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಳಿಸಲು ಸೂಚನೆ

ಹಳೆಯ ಕೈಗಾರಿಕಾ ಪ್ರದೇಶಗಳಲ್ಲಿನ ನಿವೇಶನಗಳ ಹಂಚಿಕೆ ಮಾಹಿತಿಯನ್ನು ಸ್ಕ್ಯಾನ್ ಮಾಡುವ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಮಾಡಬೇಕು.

ಬಳಿಕ ಆ ದತ್ತಾಂಶವನ್ನು ಇ-ಆಡಳಿತ ಇಲಾಖೆ ಜತೆ ಹಂಚಿಕೊಂಡು ಕೆಐಎಡಿಬಿಗೆ ಬೇಕಾಗುವ ಹಾಗೆ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುವುದು.

ನಂತರ ಅದನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ಇ-ಸ್ವತ್ತು ತಂತ್ರಾಂಶದ ಜತೆ ಜೋಡಣೆ ಮಾಡಲಾಗುತ್ತದೆ.

ಇ-ಖಾತಾ ಸೇರಿದಂತೆ ಹಲವು ಸೇವೆಗಳು ಸುಲಭ

ಆ ಮೂಲಕ ಇ-ಖಾತಾ ಕೊಡುವುದು ಸೇರಿದಂತೆ ಇತರ ಪ್ರಕ್ರಿಯೆಗಳಿಗೂ ಅನುಕೂಲ ಆಗಲಿದೆ ಎಂದು ಸಚಿವರು ಹೇಳಿದರು.

ಹೊಸ ವ್ಯವಸ್ಥೆಯಿಂದ ಭೂಸ್ವಾಧೀನ, ಪರಿಹಾರ ವಿತರಣೆ, ನಿವೇಶನ ಹಂಚಿಕೆ, ಹೂಡಿಕೆದಾರರ ಮಾಹಿತಿ ನಿರ್ವಹಣೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಒಂದೇ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಾಗಲಿದ್ದು, ಪಾರದರ್ಶಕತೆ ಮತ್ತು ಕಾರ್ಯಕ್ಷಮತೆ ಹೆಚ್ಚುವ ನಿರೀಕ್ಷೆ ಇದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular