ಬೆಂಗಳೂರು: ಯುವಕನಿಗೆ ಮದುವೆಯಾಗುವುದಾಗಿ ನಂಬಿಸಿದ ಯುವತಿ 35 ಲಕ್ಷ ರೂಪಾಯಿ ವಂಚಿಸಿದ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಆಗ್ನೇಯ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಿಲ್ ಎಂಬಾತನಿಗೆ ಯುವತಿ ಲಕ್ಷ್ಮಿ 35 ಲಕ್ಷ ರೂಪಾಯಿ ವಂಚಿಸಿದ್ದಾರೆ ಎನ್ನಲಾಗಿದೆ. ಮ್ಯಾಟ್ರಿಮೋನಿಯಲ್ಲಿ ವೆಬ್ಸೈಟ್ ಮೂಲಕ ಹುಡುಗಿಯನ್ನು ಅನಿಲ್ ಹುಡುಕುತ್ತಿದ್ದರು. ಈ ವೇಳೆ ಭಾಸ್ಕರರಾವ್ ಎಂಬಾತ ಅನಿಲ್ ಗೆ ಕರೆ ಮಾಡಿದ್ದರು. ಪ್ರೊಫೈಲ್ ಇಷ್ಟವಾಗಿದೆ. ಲಕ್ಷ್ಮಿಗೆ ನಂಬರ್ ನೀಡಿದ್ದೇನೆ ಎಂದು ಹೇಳಿದ್ದರು. ನಂತರ ಲಕ್ಷ್ಮಿ ಮೊಬೈಲ್ ನಂಬರ್ ನಿಂದ ಅನಿಲ್ ಗೆ ಕರೆ ಬಂದಿತ್ತು. ಇಬ್ಬರೂ ಕೆಲವು ದಿನ ಮೊಬೈಲ್ ಮೂಲಕ ಮಾತುಕತೆ ನಡೆಸಿದ್ದರು.
ಭವಿಷ್ಯದ ದೃಷ್ಟಿಯಿಂದ ಆನ್ಲೈನ್ ಹೂಡಿಕೆ ಮಾಡಿದ್ದೇನೆ ಎಂದು ಲಕ್ಷ್ಮಿ ಹೇಳಿದ್ದಳು. ಕ್ರಿಪ್ಟೋದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ತಿಳಿಸಿದ್ದಳು. ಮದುವೆ ಆದ ನಂತರ ಅದೇ ಹಣದಲ್ಲಿ ಸೆಟಲ್ ಆಗೋಣ ಎಂದು ಲಕ್ಷ್ಮಿ ಹೇಳಿದ್ದಳು. ಈಗ ಬೇಡ ಮದುವೆ ಬಳಿಕ ನೋಡೋಣ ಎಂದು ಯುವಕ ಅನಿಲ್ ಹೇಳಿದ್ದರು. ಆದರೂ ಹಣ ಹೂಡಿಕೆ ಮಾಡುವಂತೆ ವಂಚಕ್ಕೆ ಲಕ್ಷ್ಮಿ ಪ್ರೇರೇಪಿಸಿದ್ದಳು. ಇದನ್ನು ನಂಬಿ ಅನಿಲ್ 35 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ನಂತರ ಲಾಭದ ಹಣ ಪಡೆಯಲು ಹೋದಾಗ ಅವರ ಖಾತೆಯೇ ಡಿಲೀಟ್ ಆಗಿತ್ತು. ಇತ್ತ ನಂಬರ್ ಕೊಟ್ಟಿದ್ದ ಯುವತಿಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಕೊನೆಗೆ ತಾನು ಮೋಸ ಹೋಗಿದ್ದೇನೆ ಎಂದು ಪೊಲೀಸ್ ಠಾಣೆಗೆ ಅನಿಲ್ ದೂರು ನೀಡಿದ್ದಾರೆ. ಬೆಂಗಳೂರಿನ ಆಗ್ನೇಯ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

