ಸಾಮಾನ್ಯವಾಗಿ ದೊಡ್ಡ ಸ್ಟಾರ್ ನಟರ ಅಥವಾ ಹೀರೋಗಳ ಸಿನಿಮಾಗಳು ಬಿಡುಗಡೆಯಾದಾಗ ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಬೃಹತ್ ಕಟೌಟ್ಗಳಿಗೆ ಹೂವಿನ ಹಾರ ಹಾಕಿ, ಹಾಲಿನ ಅಭಿಷೇಕ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಮಹಾರಾಷ್ಟ್ರದ ಮಾಲೆಗಾಂವ್ನಲ್ಲಿ ನಟಿ ಮೃಣಾಲ್ ಠಾಕೂರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಹೊಸ ಚಿತ್ರದ ಪೋಸ್ಟರ್ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ವಿಭಿನ್ನವಾಗಿ ಸಂಭ್ರಮಿಸಿದ್ದಾರೆ.
ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೃಣಾಲ್ ಠಾಕೂರ್ ಅಭಿನಯದ ‘ಹಾಯ್ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರದ ಪೋಸ್ಟರ್ಗೆ ಅಭಿಮಾನಿಗಳು ಹಾಲು ಸುರಿದು ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿಯೊಬ್ಬರು, ಇಂದಿನವರೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರಂತಹ ದೊಡ್ಡ ಬಾಲಿವುಡ್ ಹೀರೋಗಳ ಚಿತ್ರಗಳು ರಿಲೀಸ್ ಆದಾಗ ಅಭಿಮಾನಿಗಳು ಪೋಸ್ಟರ್ಗಳಿಗೆ ಹಾಲು ಸುರಿಯುವುದನ್ನು ನೀವು ನೋಡಿರಬಹುದು. ಆದರೆ ಇಂದು ಮೊದಲ ಬಾರಿಗೆ ನಾವು ನಮ್ಮ ನೆಚ್ಚಿನ ನಟಿ, ನಮ್ಮ ಹೆಮ್ಮೆಯ ಖಾಂದೇಶ್ ಕಿ ಕ್ವೀನ್ ಮೃಣಾಲ್ ಠಾಕೂರ್ ಅವರ ಚಿತ್ರದ ಪೋಸ್ಟರ್ಗೆ ಹಾಲಿನ ಅಭಿಷೇಕ ಮಾಡುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳು ಪೋಸ್ಟರ್ಗೆ ಅಭಿಷೇಕ ಮಾಡಿದ ನಂತರ ಉಳಿದ ಹಾಲನ್ನು ಪ್ರಾಣಿಗಳಿಗೆ ಕುಡಿಸುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಶುಕ್ರವಾರ ವಿಶ್ವ ಪರಿಸರ ದಿನಾಚರಣೆಯೂ ಆಗಿದ್ದರಿಂದ ಅಭಿಮಾನಿಗಳು ನಟಿ ಮೃಣಾಲ್ ಹೆಸರಿನಲ್ಲಿ ಗಿಡವೊಂದನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಿದ್ದಾರೆ.
ಇನ್ನು ಚಿತ್ರದ ವಿಷಯಕ್ಕೆ ಬರುವುದಾದರೆ ಮೃಣಾಲ್ ಠಾಕೂರ್ ಮತ್ತು ವರುಣ್ ಧವನ್ ಕಾಂಬಿನೇಷನ್ನ ‘ಹಾಯ್ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ವಿಮರ್ಶಕರಿಂದ ನೆಗೆಟಿವ್ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಹಿರಿಯ ನಿರ್ದೇಶಕ ಡೇವಿಡ್ ಧವನ್ ಶೈಲಿಯ ಮನರಂಜನೆಯ ಎಲ್ಲಾ ಅಂಶಗಳು ಈ ಚಿತ್ರದಲ್ಲಿದ್ದರೂ ಕಥೆಯಲ್ಲಿ ಯಾವುದೇ ಹೊಸತನವಿಲ್ಲ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರದ ಚಿತ್ರಕಥೆ ಹಾಗೂ ಹಳೆಯ ಶೈಲಿಯ ಕಥಾಹಂದರ ಪ್ರೇಕ್ಷಕರನ್ನು ಅಷ್ಟಾಗಿ ಸೆಳೆಯುತ್ತಿಲ್ಲ. ಆದರೆ ನಟ ವರುಣ್ ಧವನ್ ತಮ್ಮ ಅದ್ಭುತ ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರನ್ನು ನಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ವಿಮರ್ಶೆಗಳು ಕೇಳಿಬರುತ್ತಿವೆ.
ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಗಮನಿಸಿದರೆ ಈ ಸಿನಿಮಾ ಭಾರತದಾದ್ಯಂತ ಕೇವಲ ೭.೫೦ ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಅತ್ಯಂತ ಸಾಧಾರಣ ಓಪನಿಂಗ್ ಪಡೆದುಕೊಂಡಿದೆ. ವೀಕೆಂಡ್ನಲ್ಲಿ ಚಿತ್ರದ ಕಲೆಕ್ಷನ್ ಹೇಗೆ ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ.

