ಬೆಂಗಳೂರು: ಪತಿ, ಇಬ್ಬರು ಮಕ್ಕಳಿದ್ದರೂ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ತನ್ನ 6 ವರ್ಷದ ಮಗಳನ್ನೇ ಕೊಲೆಗೈದು ಕಥೆ ಕಟ್ತಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಕ್ರಮ ಸಂಬಂಧ ಹಾಗೂ ಮಗುವಿನ ಬಣ್ಣದ ಕಾರಣಕ್ಕೆ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿ ವಿಲ್ಲಾವೊಂದರಲ್ಲಿ ಈ ಘಟನೆ ನಡೆದಿದೆ.
ಮೃತಪಟ್ಟಿರುವ ಮಗುವನ್ನು ವೆನ್ನಿಲಾ (6 ವರ್ಷ) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ 3 ತಿಂಗಳ ಬಳಿಕ ಕೊಲೆ ಕೇಸ್ ದಾಖಲಾಗಿದೆ.
ಬೆಂಗಳೂರು ಮೂಲದ ಪ್ರಿಯಾಂಕಾ ಹಾಗೂ ದಾವಣಗೆರೆಯ ಪ್ರವೀಣ್ 2007 ರಲ್ಲಿ ವಿವಾಹವಾಗಿದ್ದರು. ದಂಪತಿಗೆ 17 ವರ್ಷದ ಹಾಗೂ 6 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದರು. ಈ ನಡುವೆ ಪ್ರಿಯಾಂಕಾಳಿಗೆ ತನ್ನ ಕಾಲೇಜು ಗೆಳೆಯ ಮೋಹನ್ ಸಿಕ್ಕಿದ್ದ. ಇಬ್ಬರ ನಡುವೆ ಸ್ನೇಹ ಸಲುಗೆ ಬೆಳೆದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ಪ್ರಿಯಾಂಕಾ ಪತಿ ಪ್ರವೀಣ್ ಗೆ ಗೊತ್ತಾಗುತ್ತಿದ್ದಂತೆ ಪತ್ನಿಯನ್ನು ಪ್ರಶ್ನಿಸಿದ್ದಾರೆ. ಪ್ರಿಯಾಂಕಾ ತನಗೆ ಡಿವೋರ್ಸ್ ಕೊಡುವಂತೆ ಪ್ರವೀಣ್‌ಗೆ ಹೇಳಲಾರಂಭಿಸಿದ್ದಳು.
ಇದಾದ ಬಳಿಕ ದಂಪತಿ ಕಾಡುಗೋಡಿಯಲ್ಲಿ ವಾಸವಾಗಿದ್ದರು. ಪ್ರಿಯಾಂಕಾ ಎರಡನೇ ಮಗುವಿನ ತಾಯಿಯಾಗುತ್ತಿದ್ದ ವೇಳೆ ಮಗು ಕಪ್ಪಗೆ ಹುಟ್ಟಿದರೆ ನಾನು ಸುಮ್ಮನಿರಲ್ಲ. ಬೆಳ್ಳಗೆ ತನ್ನಂತೆ ಸುಂದರವಾಗಿರಬೇಕು ಎಂದಿದ್ದಳಂತೆ. ಪತ್ನಿ ತಮಾಷೆಗೆ ಹೀಗೆ ಹೇಳುತ್ತಾಳೆ ಎಂದು ಪತಿ ಪ್ರವೀಣ್ ಗಂಭೀರ್ವಾಅಗಿ ತೆಗೆದುಕೊಂಡಿಲ್ಲವಂತೆ. ಆದರೆ ಪ್ರಿಯಾಂಕಾ ಮಗುವಿಗೆ ಜನ್ಮ ನೀಡಿದಾಗ ಪತಿಯಂತೆ ಹೆಣ್ಣುಮಗು ಕಪ್ಪಗಿದ್ದಳು. ಮಗುವಿನ ಬಣ್ಣಕ್ಕೆ ಪ್ರಿಯಾಂಕಾ ಅಸಮಾಧಾನಗೊಂಡಿದ್ದಳಂತೆ. ಇಬ್ಬರು ಮಕ್ಕಳಿದ್ದರೂ ಕೂಡ ಪ್ರಿಯಾಂಕಾ ತನ್ನ ಹಳೆಯ ಗೆಳೆಯ ಮೋಹನ್ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಳು ಎನ್ನಲಾಗಿದೆ. ವಿಷಯ ತಿಳಿದು ಪತಿ ಬೈದು ಬುದ್ಧಿ ಹೇಳಿದ್ದಕ್ಕೆ ಡೈವರ್ಸ್ ಕೊಡುವಂತೆ ಪಟ್ತು ಹಿಡಿದ್ದಳಂತೆ.
ಈ ನಡುವೆ ಮಾ.24 ರಂದು ಮಗು ಏಕಾಏಕಿ ಮೃತಪಟ್ಟಿದೆ ಎಂದು ಪ್ರಿಯಾಂಕಾ ಹೇಳಿದ್ದಳು. ಏನಾಯ್ತು ಎಂದು ಕೇಳಿದಾಗ ಮಗುವಿಗೆ ಬಿರಿಯಾನಿ ತಿನ್ನಲು ಕೊಟ್ಟಿದ್ದೆ. ಆಮೇಲೆ ಏನಾಯ್ತೋ ಗೊತ್ತಿಲ್ಲ ಎಂದಿದ್ದಾಳೆ. ಮತ್ತೊಮ್ಮೆ ಐಸ್‌ಕ್ರೀಮ್ ಕೊಟ್ಟು ಎಸಿ ಹಾಕಿ ಕಾರಿನಲ್ಲಿ ಮಲಗಿಸಿದ್ದೆ, ಆದರೆ ಮನೆಗೆ ಬಂದು ನೋಡಿದಾಗ ಮಗು ಸತ್ತುಹೋಗಿತ್ತು ಎಂದು ಕಥೆ ಕಟ್ಟಿದ್ದಾಳೆ.
ಪತ್ನಿಯ ನಡೆ, ಕ್ಷಣಕ್ಕೊಂದು ರೀತಿ ನೀಡುತ್ತಿದ್ದ ಹೇಳಿಕೆಗೆ ಅನುಮಾನಗೊಂಡ ಪತಿ ಪ್ರವೀಣ್ ಮಗುವಿನ ಮರಣೋತ್ತರ ಪರೀಕ್ಷೆ ವರದಿಯನ್ನ ತನ್ನ ಸಂಬಂಧಿ ವೈದ್ಯರೊಬ್ಬರಿಗೆ ಕಳುಹಿಸಿದ್ದಾರೆ. ವಿದೇಶದಲ್ಲಿದ್ದ ವೈದ್ಯರು ಇದರಲ್ಲಿ ಏನೋ ಮಿಸ್ಟೇಕ್ ಆಗಿದೆ. ಏಸ್‌ಕ್ರೀಮ್ ಅಥವಾ ಬಿರಿಯಾನಿ ತಿಂದು ಮಗು ಸತ್ತಿಲ್ಲ ಎಂದು ಹೇಳಿದ್ದಾರೆ. ಬಳೀಕ ಪ್ರವೀಣ್ ತನ್ನ ಮಗಳ ಸಾವಿನ ಬಗ್ಗೆ ಅನುಮಾನವಿದೆ ಎಂದು ಪೊಲಿಸ್ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ಆರಂಭಿಸಿದ ಪೊಲೀಸರು ಪ್ರಿಯಾಂಕಾಳ ಗೆಳೆಯ ಮೋಹನ್‌ನನ್ನ ಬಂಧಿಸಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆ ಪ್ರಿಯಾಂಕಾ ನಾಪತ್ತೆಯಾಗಿದ್ದಾಳೆ. ಪ್ರಿಯಕರ ಮೋಹನ್ ಜೊತೆ ಸೇರಿ ಪ್ರಿಯಾಂಕಾಳೆ ಮಗುವನ್ನು ಕೊಂದು ಡ್ರಾಮಾ ಮಾಡಿರುವುದು ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ಪ್ರಿಯಾಂಕಾಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

