ಬೆಂಗಳೂರು : ಸ್ಯಾಂಡಲ್ವುಡ್ ನಟಿ ಶುಭ ಪೂಂಜಾ ಮತ್ತು ಉದ್ಯಮಿ ಸುಮಂತ್ ಬಿಲ್ಲವ ದಾಂಪತ್ಯ ಜೀವನ ಅಂತ್ಯವಾಗಿದೆ. ನಾಲ್ಕು ವರ್ಷಗಳ ವೈವಾಹಿಕ ಬದುಕಿನ ಬಳಿಕ ಈ ಜೋಡಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲು ನಿರ್ಧರಿಸಿದ್ದು, ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಹೌದು, ನಟಿ ಶುಭ ಪೂಂಜಾ ಮತ್ತು ಸುಮಂತ್ ಬಿಲ್ಲವ ದಾಂಪತ್ಯ ಜೀವನಕ್ಕೆ ಮುಕ್ತಾಯ ಹಾಡಲು ನಿರ್ಧರಿಸಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ (Mutual Consent) ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಉಡುಪಿ ಮೂಲದ ಉದ್ಯಮಿ ಸುಮಂತ್ ಬಿಲ್ಲವ ಮತ್ತು ಶುಭ ಪೂಂಜಾ ಕೆಲವು ವರ್ಷಗಳ ಪ್ರೀತಿಯ ನಂತರ 2022ರ ಜನವರಿ 5ರಂದು ವಿವಾಹವಾಗಿದ್ದರು. ಮದುವೆಯಾದ ನಾಲ್ಕು ವರ್ಷಗಳ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.ಇವರಿಬ್ಬರು ಫ್ಯಾಮಿಲಿ ಕೋರ್ಟ್ನಲ್ಲಿ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ವಿಚ್ಛೇದನಕ್ಕೆ ನಿಖರವಾದ ಕಾರಣಗಳನ್ನು ಸುಮಂತ್ ಬಿಲ್ಲವ ಬಹಿರಂಗಪಡಿಸಿಲ್ಲ ಮತ್ತು ತಮ್ಮ ವೈಯಕ್ತಿಕ ನಿರ್ಧಾರವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.
‘ಮೊಗ್ಗಿನ ಮನಸ್ಸು’ ಮತ್ತು ‘ಚಂಡ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಶುಭ ಪೂಂಜಾ, ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿಯೂ ಜನಪ್ರಿಯತೆ ಗಳಿಸಿದ್ದರು. ಅವರ ಈ ನಿರ್ಧಾರ ಅಭಿಮಾನಿಗಳಲ್ಲಿ ಮತ್ತು ಸ್ಯಾಂಡಲ್ವುಡ್ ವಲಯದಲ್ಲಿ ಅಚ್ಚರಿ ಮೂಡಿಸಿದೆ.ಶುಭಾ ಪೂಂಜಾ ಅವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ಮತ್ತು ಮಾಜಿ ಮಾಡೆಲ್. ‘ಮೊಗ್ಗಿನ ಮನಸು’ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿ ಹಾಗೂ ‘ಬಿಗ್ ಬಾಸ್ ಕನ್ನಡ’ ಸೀಸನ್ 8 ಮೂಲಕ ಹೆಚ್ಚು ಜನಪ್ರಿಯರಾದರು. ಶುಭಾ ಪೂಂಜಾ ತುಳುವ ಸಮುದಾಯದ ಮಂಗಳೂರು ಮೂಲದವರು . ಅವರು ಬೆಂಗಳೂರಿನಲ್ಲಿ ಬೆಳೆದರು ಮತ್ತು ಮಾಡೆಲಿಂಗ್ ಪ್ರಾರಂಭಿಸುವ ಮೊದಲು ಬೆಂಗಳೂರಿನ ಜಯನಗರದ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಅಧ್ಯಯನ ಮಾಡಿದರು , ವಿವಿಧ ದೂರದರ್ಶನ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.

