ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಈ ಬಾರಿ ಯಾವುದೇ ಮಹಿಳೆಗೆ ಅವಕಾಶ ಕಲ್ಪಿಸಿಲ್ಲ.
ಇದೇ ಮೊದಲ ಬಾರಿಗೆ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ನೀಡದೆ ಕೇವಲ ಪುರುಷರಿಗೆ ಮಾತ್ರ ಮಣೆ ಹಾಕಲಾಗಿದೆ. ವಾಸ್ತವವಾಗಿ ಸಚಿವ ಸಂಪುಟ ರಚನೆಯಾಗುವ ವೇಳೆ ಒಂದಿಬ್ಬರು ಮಹಿಳೆಯರಿಗೆ ಸ್ಥಾನ ಕಲ್ಪಿಸುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದೇ ಇತ್ತು.
ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷಗಳು ಅಧಿಕಾರದಲ್ಲಿದ್ದಾಗ ಮಹಿಳೆಯರಿಗೆ ಅವಕಾಶ ನೀಡುವ ಸಂಪ್ರದಾಯ ಇತ್ತು.
ಇದೇ ಮೊದಲ ಬಾರಿಗೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಯಾವುದೇ ಮಹಿಳೆಯರನ್ನು ಸಂಪುಟಕ್ಕೆ ತೆಗೆದುಕೊಳ್ಳದೆ ನಿರ್ಲಕ್ಷ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಮಹಿಳಾ ಕೋಟದಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ಗೆ ಅವಕಾಶ ನೀಡಲಾಗಿತ್ತು .
ಕಳೆದ ಮೂರು ವರ್ಷಗಳಿಂದ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಡಿಕೆ ಶಿವಕುಮಾರ್ ಸಂಪುಟದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ಗೆ ಉನ್ನತ ಸ್ಥಾನಮಾನ ಸಿಗಲಿದೆ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು.
ಆದರೆ ಮಹಿಳಾ ಕೂಟದಲ್ಲಿ ಸಚಿವ ಸ್ಥಾನ ಪಡೆಯಲು ಹಲವಾರು ಆಕಾಂಕ್ಷಿಗಳು ಈ ಬಾರಿ ತೀವ್ರ ಲಾಬಿ ನಡೆಸಿದ್ದರು.
ಕೆಜಿಎಫ್ ಶಾಸಕಿ ಹಾಗೂ ಮಾಜಿ ಸಚಿವ ಕೆ ಹೆಚ್ ಮುನಿಯಪ್ಪ ಅವರ ಪುತ್ರಿ ರೂಪಕಲ ಶಶಿಧರ್ ,ವಿಧಾನ ಪರಿಷತ್ ಉಮಾಶ್ರೀ ಸೇರಿದಂತೆ ಒತ್ತಡ ಹಾಕಿ ತಮ್ಮನ್ನು ಸಂಪುಟಕ್ಕೆ ಪರಿಗಣಿಸಬೇಕೆಂದು ಮನವಿ ಮಾಡಿಕೊಂಡಿದ್ದರು.
ಬುಧವಾರ ಬೆಳಗ್ಗೆ ವರೆಗೂ ಸಂಪಟಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಇಲ್ಲವೇ ಬೇರೊಬ್ಬರು ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.
ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಉಳಿದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಎಐಸಿಸಿ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರನ್ನು ಭೇಟಿಯಾಗಿ ಸಂಪುಟಕ್ಕೆ ಪರಿಗಣಿಸಬೇಕೆಂದು ಮನವಿ ಮಾಡಿದ್ದರು.
ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವುದರಿಂದ ಸಹಜವಾಗಿ ಲಕ್ಷ್ಮಿ ಹೆಬ್ಬಳ್ಕರ್ಗೆ ಈ ಬಾರಿ ಪ್ರಭಾವಿ ಖಾತೆ ಕೊಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ.
ಹಾಗೆ ನೋಡಿದರೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರು ನಾಮಕಾವಸ್ತೆಗೆ ಎಂಬಂತೆ ಸಂಪುಟಕ್ಕೆ ಕೇವಲ ಒಬ್ಬ ಮಹಿಳೆಯರನ್ನು ತೆಗೆದುಕೊಳ್ಳುವುದು ವಾಡಿಕೆ ಆಗಿದೆ. ಬಿಜೆಪಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶಶಿಕಲಾ ಜಿಲ್ಲೆ ಮಾತ್ರ ಸಚಿವರಾಗಿದ್ದರು.
ಮಹಿಳೆಯರ ಸಬಲೀಕರಣ ಸ್ಥಾನಮಾನದ ಬಗ್ಗೆ ಮಾತನಾಡುವ ಪುರುಷ ಸಮಾಜದಲ್ಲಿ ಅಧಿಕಾರ ಕೊಡಬೇಕೆಂದು ಬಂದಾಗ ನಿರ್ಲಕ್ಷ್ಯ ಹಾಗೂ ನಿರ್ಲಿಪ್ತತೆ ತೋರುತ್ತಾರೆ ಎಂಬ ಆಪಾದನೆಗಳು ಕೇಳಿ ಬರುತ್ತಲೇ ಇವೆ.

