ಬೆಂಗಳೂರು: ನನ್ನನ್ನು ರಾಜಕೀಯವಾಗಿ ಬೆಳೆಸಿದ ಜನತಾ ಜನಾರ್ಧನರಿಗೆ ಕಾಯ ವಾಚ ಮನಸ ಸಂಪೂರ್ಣವಾಗಿ ಅರ್ಪಿಸಿಕೊಂಡು ಜನರ ಸೇವೆ ಮಾಡುತ್ತೇನೆ ಎಂದು ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶಪಥ ಮಾಡಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆವರು, ಮನೆ ಮಗನಂತೆ ಹರಸಿ ಹಾರೈಸಿ ರಾಜಕೀಯ ಕ್ಷೇತ್ರದಲ್ಲಿ ಈ ಹಂತದವರೆಗೆ ತನ್ನನ್ನು ಬೆಳೆಸಿದ ಜನರಿಗೆ ಸಮರ್ಪಿಸಿಕೊಂಡು ನಾನು ವಿನಯ ಪೂರ್ವಕವಾಗಿ ಜನಸೇವೆ ಮಾಡುತ್ತೇನೆಂದು ವಾಗ್ದಾನ ಮಾಡಿದ್ದಾರೆ.. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ನಾನು ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಮುಖ್ಯಮಂತ್ರಿಯಾಗಿ ರಾಜ್ಯದ ಏಳುಕೋಟಿ ಜನತೆಯ ಸೇವೆ ಮಾಡಲು ಒದಗಿ ಬಂದಿರುವ ಈ ಅವಕಾಶ ನನ್ನ ಬದುಕಿನ ಭಾಗ್ಯ ಎಂದು ವಿನೀತನಾಗಿ ಸ್ವೀಕರಿಸುವದಾಗಿ ಹೇಳಿದ್ದಾರೆ.
ರಾಜ್ಯದ ಜನತೆಗೆ ನಮ್ಮ ಸರ್ಕಾರ ಮತ್ತು ಹೊಸ ಸಾರಥಿಯಾಗಿ ಬಂದಿರುವ ನನ್ನ ಬಗ್ಗೆ ಬಹಳ ನಿರೀಕ್ಷೆಗಳಿದೆ ಎನ್ನುವುದು ನನಗೆ ಗೊತ್ತಿದೆ. ಇಂದು ಕರ್ನಾಟಕ ಜಗಮೆಚ್ಚುತ್ತಿರುವ ಹೆಮ್ಮೆಯ ರಾಜ್ಯವಾಗಿದೆ. ಅಭಿವೃದ್ದಿ ಪಥದಲ್ಲಿರುವ ಕರ್ನಾಟಕವನ್ನು ಸಮೃದ್ಧ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಜ್ಯವನ್ನಾಗಿ ರೂಪಿಸಬೇಕೆಂಬ ಕನಸು ನನ್ನದು ಎಂದು ಹೇಳಿದ್ದಾರೆ. ಅದನ್ನು ನನಸು ಮಾಡಲು ವಿಶ್ವಾಸಪೂರ್ವಕವಾಗಿ ಸಹಕಾರ ನೀಡಬೇಕೆಂದು ಏಳು ಕೋಟಿ ಕನ್ನಡಿಗರಲ್ಲಿ ಬೊಗಸೆಯೊಡ್ಡಿ ಕೇಳಿಕೊಳ್ಳುತ್ತಿದ್ದೇನೆ.
ಪಕ್ಷದ ಮೇಲಿನ ನಿಷ್ಠೆ ಮತ್ತು ಜನಸೇವೆ ಮಾಡುವ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಮುಖ್ಯಮಂತ್ರಿಯಾಗಿ ಸೇವೆಗೈಯ್ಯುವ ಅವಕಾಶ ನೀಡಿದ ಕಾಂಗ್ರೆಸ್ ಪಕ್ಷಕ್ಕೆ, ನನ್ನ ಮೇಲೆ ವಿಶ್ವಾಸ ಇಟ್ಟು ತಮ್ಮ ನಾಯಕನಾಗಿ ಆಯ್ಕೆ ಮಾಡಿರುವ ಶಾಸಕ ಮಿತ್ರರಿಗೆ ನಾನು ಆಭಾರಿಯಾಗಿದ್ದೇನೆ. ಮತ್ತೊಮ್ಮೆ ತಮ್ಮೆಲ್ಲರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ-ವಿಶ್ವಾಸ ಸದಾ ನನ್ನ ಮೇಲಿರಲಿ ಎಂದು ಸಿಎಂ ಶಿವಕುಮಾರ್ ರಾಜ್ಯದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

