ಬೆಂಗಳೂರು: ನನಗೆ ಸುಗಂಧರಾಜ ಹೂವಿನ ಅಲರ್ಜಿ ಇರುವುದರಿಂದ ನನ್ನ ಭೇಟಿ ವೇಳೆ ಆ ಹೂವಿನ ಹಾರ ನಿಷೇಧಿಸಲಾಗಿದೆ. ಯಾರೂ ಸುಗಂಧರಾಜ ಹೂವಿನ ಹಾರ ತರಬಾರದು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನನಗೆ ಸುಗಂಧರಾಜ ಹೂವಿನ ಹಾರ ಹಾಕಬೇಡಿ ಎಂದರು. ಕಾರ್ಯಕರ್ತರ ಉತ್ಸಾಹ ನನಗೆ ಅರ್ಥವಾಗುತ್ತದೆ. ಪ್ರಮಾಣ ವಚನ ಕಾರ್ಯಕ್ರಮವನ್ನು ಸರಳವಾಗಿ ಮಾಡುತ್ತಿರುವುದರಿಂದ ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸಲು ಆಗುವುದಿಲ್ಲ ಎಂದು ಹೇಳಿದರು.
ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸಿಎಂ ಆಗುತ್ತಿರುವುದು ನಾನಲ್ಲ, ಕಾರ್ಯಕರ್ತರೇ ಸಿಎಂ ಆಗುತ್ತಿದ್ದಾರೆ. 1979 ರಿಂದ ನಾನು ಪಕ್ಷದಲ್ಲಿ ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ಸಂಭ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ದೆಹಲಿ ಪ್ರವಾಸದ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಹಾಗೂ ಸಿದ್ದರಾಮಯ್ಯ ದೆಹಲಿಗೆ ಹೋಗುತ್ತಿದ್ದೇವೆ ಎಂದು ತಿಳಿಸಿದರು. ಯತೀಂದ್ರ ಸಿದ್ದರಾಮಯ್ಯ ಅವರ ಭೇಟಿ ವಿಚಾರವಾಗಿ, ಅವರು ನನ್ನ ಸಹೋದ್ಯೋಗಿ. ಪಕ್ಷದಲ್ಲಿ ಈ ಹಿಂದೆಯೂ ಅವರೊಟ್ಟಿಗೆ ಕೆಲಸ ಮಾಡಿರುವೆ, ಮುಂದೆಯೂ ಕೆಲಸ ಮಾಡುವೆ ಎಂದು ತಿಳಿಸಿದರು.

