ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ 2026 ಫೈನಲ್ ಪಂದ್ಯವು ಕೇವಲ ಕ್ರಿಕೆಟ್ ರೋಮಾಂಚನಕ್ಕೆ ಮಾತ್ರವಲ್ಲದೆ, ಸಾಂಸ್ಕೃತಿಕ ಮತ್ತು ಬಾಲಿವುಡ್ ರಂಗಿನಿಂದಲೂ ಜಗಮಗಿಸಿದೆ. ಹೈವೋಲ್ಟೇಜ್ ಪಂದ್ಯದ ಮೊದಲ ಇನ್ನಿಂಗ್ಸ್ ವಿರಾಮದ ಅವಧಿಯಲ್ಲಿ ಖ್ಯಾತ ಗಾಯಕ ಕೈಲಾಶ್ ಖೇರ್ ತಮ್ಮ ಅದ್ಭುತ ಗಾಯನದ ಮೂಲಕ ಕ್ರೀಡಾಂಗಣದಲ್ಲಿದ್ದ ಲಕ್ಷಾಂತರ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದರು.
ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳನ್ನು ಕೈಲಾಶ್ ಖೇರ್ ತಮ್ಮ ಭಕ್ತಿ ಪ್ರಧಾನ ಹಾಗೂ ಶಕ್ತಿಶಾಲಿ ಧ್ವನಿಯ ಮೂಲಕ ಭಕ್ತಿ ಸಾಗರದಲ್ಲಿ ತೇಲಿಸಿದರು. ತಮ್ಮ ಪ್ರಸಿದ್ಧ ಭಕ್ತಿಗೀತೆ ‘ಶಿವ ತಾಂಡವ ಸ್ತೋತ್ರ’ದೊಂದಿಗೆ ಪ್ರದರ್ಶನ ಆರಂಭಿಸಿದ ಗಾಯಕ, ಇಡೀ ಕ್ರೀಡಾಂಗಣದಲ್ಲಿ ಆಧ್ಯಾತ್ಮಿಕ ಮತ್ತು ಅದ್ಭುತ ಶಕ್ತಿಯ ಸಂಚಲನ ಮೂಡಿಸಿದರು. ಇದರ ಬೆನ್ನಲ್ಲೇ ಅವರ ಮತ್ತೊಂದು ಜನಪ್ರಿಯ ಗೀತೆ ‘ಬಗಡ್ ಬಮ್ ಬಮ್’ ಹಾಡಿಗೆ ಇಡೀ ಸ್ಟೇಡಿಯಂ ಧ್ವನಿಗೂಡಿಸಿತು. ಕ್ರೀಡಾಂಗಣದ ಜಬರ್ದಸ್ತ್ ವಾತಾವರಣಕ್ಕೆ ಕೈಲಾಶ್ ಖೇರ್ ಲೈವ್ ಪರ್ಫಾರ್ಮೆನ್ಸ್ ಮತ್ತಷ್ಟು ಮೆರುಗು ನೀಡಿತು.
ಸ್ಟೇಡಿಯಂನಲ್ಲಿ ಬಾಲಿವುಡ್ ತಾರೆಯರ ದಂಡು
ಒಂದೆಡೆ ಕೈಲಾಶ್ ಖೇರ್ ಅವರ ಸಂಗೀತದ ಅಲೆ ಇದ್ದರೆ, ಮತ್ತೊಂದೆಡೆ ಬಾಲಿವುಡ್ ತಾರೆಯರಾದ ವರುಣ್ ಧವನ್, ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕಾಣಿಸಿಕೊಂಡು ಪಂದ್ಯದ ರೋಮಾಂಚನವನ್ನು ಹೆಚ್ಚಿಸಿದರು. ತಮ್ಮ ಮುಂಬರುವ ಕಾಮಿಡಿ ಚಿತ್ರ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಪ್ರಚಾರದ ಭಾಗವಾಗಿ ಈ ನಟರು ನಿರ್ಮಾಪಕ ರಮೇಶ್ ತೌರಾನಿ ಅವರೊಂದಿಗೆ ಪಂದ್ಯ ವೀಕ್ಷಿಸಲು ಆಗಮಿಸಿದ್ದರು. ಚಿತ್ರದ ಹೆಸರಿರುವ ಬಿಳಿ ಬಣ್ಣದ ಮ್ಯಾಚಿಂಗ್ ಟಿ-ಶರ್ಟ್ ಧರಿಸಿದ್ದ ತಾರೆಯರು ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸುತ್ತಿದ್ದ ದೃಶ್ಯಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

