ಬೆಂಗಳೂರು: ಬೇಸಿಗೆ ರಜೆಯಲ್ಲಿದ್ದ ಮಕ್ಕಳು ಇಂದಿನಿಂದ ಶಾಲೆಗೆ ಹೊರಡಲಿದ್ದಾರೆ. ರಾಜ್ಯಾದ್ಯಂತ ಜೂನ್ 1ರಿಂದ ಶಾಲೆಗಳು ಪುನಾರಾರಂಭವಾಗಲಿದ್ದು, 2026- 27ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಲಿವೆ.
ಮೇ 29ರಂದು ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿ ಸೋಮವಾರ ಶಾಲೆ ಆರಂಭೋತ್ಸವಕ್ಕೆ ಸೂಚನೆ ನೀಡಿದೆ. ಇಂದು ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಕಾರ್ಯ ಚಟುವಟಿಕೆಗಳು ಆರಂಭವಾಗಲಿವೆ.
ಶಾಲಾ ಮಟ್ಟದ ಸ್ಥಳೀಯ ಶಿಕ್ಷಣ ಅಧಿಕಾರಿಗಳು, ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಲಾಗುವುದು. ಸರ್ಕಾರಿ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳಿಗೆ ಅಕ್ಷರ ದಾಸೋಹದಡಿ ಸಿಹಿ ನೀಡುವ ಮೂಲಕ ಸ್ವಾಗತಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಅಲ್ಲದೆ ಸರ್ಕಾರಿ ಶಾಲೆಗಳ ಮುಂಭಾಗದಲ್ಲಿ ಸರ್ಕಾರದಿಂದ ನೀಡುವ ಸೌಲಭ್ಯಗಳು, ಮಕ್ಕಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಫಲಕಗಳ ಮೂಲಕ ಜಾಗೃತಿ ಮೂಡಿಸುವಂತೆ ಸೂಚಿಸಲಾಗಿದೆ. ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಲು ಜಾಗೃತಿ ಪತ್ರ ಅಭಿಯಾನಗಳ ಮೂಲಕ ಜಾಗೃತಿ ಮೂಡಿಸಲಾಗುವುದು.
ಈ ಶೈಕ್ಷಣಿಕ ಸಾಲಿನಿಂದ ಎಲ್ಲಾ ಸರ್ಕಾರಿ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳಿಗೆ ಮುಖ ಚಹರೆ ಪತ್ತೆ ಆಧಾರಿತ ಡಿಜಿಟಲ್ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಆ್ಯಪ್ ಮೂಲಕ ಶಿಕ್ಷಕರು ವಿದ್ಯಾರ್ಥಿಗಳು ಹಾಜರಾತಿ ದಾಖಲಿಸಬೇಕಿದೆ. ಮೊದಲ ಹಂತದಲ್ಲಿ ಶಿಕ್ಷಕರಿಗೆ ಮಾತ್ರ ಈ ಹಾಜರಾತಿ ಕಡ್ಡಾಯಗೊಳಿಸಿದ್ದು, ನಂತರ ವಿದ್ಯಾರ್ಥಿಗಳಿಗೂ ಇದನ್ನು ವಿಸ್ತರಿಸಲಾಗುವುದು.

