ಬೆಂಗಳೂರು: ರಾಜ್ಯದ 4 ರಾಜ್ಯಸಭಾ ಸ್ಥಾನಗಳು ಮತ್ತು ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಚುನಾವಣೆ ನಡೆಸುವ ಸಂಬಂಧ ಕೇಂದ್ರ ಚುನಾವಣಾ ಆಯೋಗ ಸೋಮವಾರ ಅಧಿಕೃತ ಅಧಿಸೂಚನೆ ಹೊರಡಿಸಲಿದೆ.
ಅಧಿಸೂಚನೆ ಪ್ರಕಟವಾದ ಬೆನ್ನಲ್ಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಜೂನ್ 8 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂನ್ 9ರಂದು ನಾಮಪತ್ರಗಳ ಪರಿಶೀಲನೆ, ಜೂನ್ 11ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಜೂನ್ 18ರಂದು ಮತದಾನ ನಡೆದು ಫಲಿತಾಂಶ ಪ್ರಕಟಿಸಲಾಗುವುದು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು, ಬಿಜೆಪಿಯ ನಾರಾಯಣ ಕೊರಗಪ್ಪ, ಈರಣ್ಣ ಕಡಾಡಿ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಜೂನ್ 25ಕ್ಕೆ ಅಂತ್ಯವಾಗಲಿದೆ.
ಜೂನ್ 30ರಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಕಾಂಗ್ರೆಸ್ ನ ಬಿ.ಕೆ. ಹರಿಪ್ರಸಾದ್, ನಾಸಿರ್ ಅಹಮದ್, ತಿಪ್ಪಣ್ಣಪ್ಪ, ಬಿಜೆಪಿಯ ಪ್ರತಾಪ ಸಿಂಹ ನಾಯಕ್, ಎಂಟಿಬಿ ನಾಗರಾಜ್, ಸುನಿಲ್ ವಲ್ಯಾಪುರೆ, ಜೆಡಿಎಸ್ ನ ಗೋವಿಂದರಾಜು ನಿವೃತ್ತರಾಗಲಿದ್ದಾರೆ. ಈ ಎಲ್ಲಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಇಂದು ಅಧಿಕೃತ ಅಧಿಸೂಚನೆ ಹೊರಡಿಸಲಾಗುವುದು.

