ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಎರಡನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಅದರಂತೆ ಗುಜರಾತ್ ಟೈಟನ್ಸ್ ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿ 156 ರನ್‌ಗಳ ಸುಲಭ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿದೆ.
ಗುಜರಾತ್ ಟೈಟನ್ಸ್ ಇನ್ನಿಂಗ್ಸ್: ತಂಡ 26 ರನ್‌ಗೆ ತನ್ನ ಆರಂಭಿಕರ ವಿಕೆಟ್ ಕಳೆದುಕೊಂಡು ಕೆಟ್ಟ ಆರಂಭ ಪಡೆದುಕೊಂಡಿತು. ನಾಯಕ ಶುಬ್‌ಮನ್ ಗಿಲ್ 8 ಎಸೆತಗಳಿಗೆ 10 ರನ್ ಗಳಿಸಿದ್ದಾಗ ಜೋಶ್ ಹೇಜಲ್‌ವುಡ್ ಎಸೆತದಲ್ಲಿ ರಜತ್ ಪಟಿದಾರ್‌ಗೆ ಕ್ಯಾಚ್ ನೀಡಿ ಔಟ್ ಆದರು. ಬೆನ್ನಲ್ಲೇ ಸಾಯಿ ಸುದರ್ಶನ್ 12 ಎಸೆತಗಳಲ್ಲಿ 12 ರನ್ ಗಳಿಸಿ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿದರು. ಬೆನ್ನಲ್ಲೇ ನಿಶಾಂತ್ ಸಿಂಧು 20, ಜೋಸ್ ಬಟ್ಲರ್ 19, ಅರ್ಷದ್ ಖಾನ್ 15, ರಾಹುಲ್ ತೆವಾಟಿಯಾ 7, ಜೇಸನ್ ಹೋಲ್ಡರ್ 7, ರಶೀದ್ ಖಾನ್ 7 ಹಾಗೂ ಕಗಿಸೊ ರಬಾಡಾ ಅಜೇಯ 3 ರನ್ ಗಳಿಸಿದರು. ಹೀಗೆ ಒಂದೆಡೆ ಸಾಲು ಸಾಲು ವಿಕೆಟ್ ಉರುಳುತ್ತಿದ್ದರೆ ಮತ್ತೊಂದೆಡೆ ಏಕಾಂಗಿ ಹೋರಾಟ ನಡೆಸಿದ ವಾಷಿಂಗ್ಟನ್ ಸುಂದರ್ 37 ಎಸೆತಗಳಲ್ಲಿ ಅಜೇಯ 50 ರನ್ ಬಾರಿಸಿದರು.
ಗುಜರಾತ್ ಟೈಟನ್ಸ್ ತಂಡವನ್ನು ಕಾಡಿದ ಆರ್‌ಸಿಬಿ ಬೌಲಿಂಗ್ ಪಡೆಯ ಪರ ರಸಿಖ್ ಸಲಾಮ್ ಧರ್ ಮೂರು ವಿಕೆಟ್, ಜೋಶ್ ಹೇಜಲ್‌ವುಡ್ ಹಾಗೂ ಭುವನೇಶ್ವರ್ ಕುಮಾರ್ ತಲಾ ಎರಡು ವಿಕೆಟ್ ಪಡೆದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್ ಐಯ್ಯರ್ 62 ರನ್‌ಗಳ ಭರ್ಜರಿ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಕಟ್ಟಿಕೊಟ್ಟರು. ವೆಂಕಟೇಶ್ ಐಯ್ಯರ್ 16 ಎಸೆತಗಳಲ್ಲಿ 32 ರನ್ ಬಾರಿಸಿದರೆ, ಅಜೇಯರಾಗಿ ಉಳಿದ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 75 ರನ್ ಚಚ್ಚಿದರು. ದೇವದತ್ ಪಡಿಕ್ಕಲ್ 1, ನಾಯಕ ರಜತ್ ಪಟಿದಾರ್ 15, ಕೃನಾಲ್ ಪಾಂಡ್ಯ 1, ಟಿಮ್ ಡೇವಿಡ್ 24, ಜಿತೇಶ್ ಶರ್ಮಾ ಅಜೇಯ 11 ರನ್ ಗಳಿಸಿದರು.
ರಶೀದ್ ಖಾನ್ ಎರಡು ವಿಕೆಟ್, ಅರ್ಶದ್ ಖಾನ್, ಮೊಹಮ್ಮದ್ ಸಿರಾಜ್ ಹಾಗೂ ಕಗಿಸೊ ರಬಾಡಾ ತಲಾ ಒಂದೊಂದು ವಿಕೆಟ್ ಪಡೆದರು.

