ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ( ಮೇ 31 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ಗುಜರಾತ್ ಟೈಟನ್ಸ್ ಬೇಗನೆ ತನ್ನ ಆರಂಭಿಕರ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಕೇವಲ 26 ರನ್ಗೆ ಮೊದಲ ಎರಡು ವಿಕೆಟ್ಗಳನ್ನು ಕಳೆದುಕೊಂಡಿದೆ.
ನಾಯಕ ಶುಬ್ಮನ್ ಗಿಲ್ 8 ಎಸೆತಗಳಿಗೆ 10 ರನ್ ಗಳಿಸಿದ್ದಾಗ ಜೋಶ್ ಹೇಜಲ್ವುಡ್ ಎಸೆತದಲ್ಲಿ ರಜತ್ ಪಟಿದಾರ್ಗೆ ಕ್ಯಾಚ್ ನೀಡಿ ಔಟ್ ಆದರು. ಬೆನ್ನಲ್ಲೇ ಸಾಯಿ ಸುದರ್ಶನ್ 12 ಎಸೆತಗಳಲ್ಲಿ 12 ರನ್ ಗಳಿಸಿ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿದರು.
ಹೀಗೆ ಈ ಇಬ್ಬರ ವಿಕೆಟ್ ಬೀಳುತ್ತಿದ್ದಂತೆ ಆರೆಂಜ್ ಕ್ಯಾಪ್ ವಿಜೇತನಾಗಿ ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಹೊರಹೊಮ್ಮಿದ್ದಾರೆ. ಹೌದು, ಟೂರ್ನಿಯಲ್ಲಿ 776 ರನ್ ಬಾರಿಸಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡು ಆರೆಂಜ್ ಕ್ಯಾಪ್ ವಿಜೇತನಾಗುವ ಮೂಲಕ ಆರೆಂಜ್ ಕ್ಯಾಪ್ ಗೆದ್ದ ಅತಿ ಕಿರಿಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಇನ್ನು ಪಂದ್ಯ ಆರಂಭಕ್ಕೂ ಮುನ್ನ ಗುಜರಾತ್ ಟೈಟನ್ಸ್ ತಂಡದ ಶುಬ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಈ ಪಟ್ಟಿಯಲ್ಲಿ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದ ಕಾರಣ ವೈಭವ್ ಸೂರ್ಯವಂಶಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುವ ಅವಕಾಶವಿತ್ತು. ಆದರೆ ಈ ಇಬ್ಬರೂ ವಿಫಲರಾಗಿದ್ದು ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ವೈಭವ್ ಅಗ್ರಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ.
ಟೂರ್ನಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿ:
1. ವೈಭವ್ ಸೂರ್ಯವಂಶಿ – 776 ರನ್
2. ಶುಬ್ಮನ್ ಗಿಲ್ – 732 ರನ್
3. ಸಾಯಿ ಸುದರ್ಶನ್ – 722 ರನ್
4. ಹೆನ್ರಿಕ್ ಕ್ಲಾಸೆನ್ – 624 ರನ್
5. ಇಶಾನ್ ಕಿಶನ್ – 602 ರನ್

