ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯ, ವ್ರತ ಅಥವಾ ಪೂಜೆ-ಪುನಸ್ಕಾರಗಳನ್ನು ಮಾಡುವಾಗ ಶ್ರೀಫಲ ಎಂದು ಕರೆಯಲ್ಪಡುವ ತೆಂಗಿನಕಾಯಿಗೆ ಅಗ್ರಸ್ಥಾನವಿದೆ. ಸಾಧಾರಣವಾಗಿ ಎಲ್ಲಾ ತೆಂಗಿನಕಾಯಿಗಳಿಗೂ ಮೂರು ಕಣ್ಣುಗಳಿರುತ್ತವೆ. ಇವುಗಳನ್ನು ಸಾಕ್ಷಾತ್ ಪರಶಿವನ ಮೂರು ಕಣ್ಣುಗಳಿಗೆ ಹೋಲಿಸಲಾಗುತ್ತದೆ. ಆದರೆ, ಪ್ರಕೃತಿಯ ವಿಸ್ಮಯ ಎಂಬಂತೆ ಅಪರೂಪಕ್ಕೊಮ್ಮೆ ಕೇವಲ ಒಂದೇ ಕಣ್ಣಿರುವ ತೆಂಗಿನಕಾಯಿ ಸಿಗುತ್ತದೆ ಇದನ್ನು ಏಕಾಕ್ಷಿ ತೆಂಗಿನಕಾಯಿ ಅಥವಾ ‘ಏಕಾಕ್ಷಿ ನಾರಿಕೇಳ’ ಎಂದು ಕರೆಯಲಾಗುತ್ತದೆ. ತಂತ್ರಶಾಸ್ತ್ರ ಹಾಗೂ ಜ್ಯೋತಿಷ್ಯದ ಪ್ರಕಾರ, ಇದು ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪವಾಗಿದ್ದು, ಇದನ್ನು ಪೂಜಿಸುವುದರಿಂದ ಜೀವನದಲ್ಲಿನ ಹಲವು ಕಷ್ಟಗಳು ಚುಟುಕಿನಲ್ಲಿ ನಿವಾರಣೆಯಾಗುತ್ತವೆ
ಏನಿದು ಏಕಾಕ್ಷಿ ನಾರಿಕೇಳದ ಮಹತ್ವ?
ತೆಂಗಿನಕಾಯಿಯ ಮೇಲಿನ ನಾರನ್ನು ಸುಲಿದಾಗ ನಮಗೆ ಮೂರು ಕಣ್ಣುಗಳ ಆಕೃತಿ ಕಾಣಸಿಗುತ್ತದೆ. ಆದರೆ ಲಕ್ಷಾಂತರ ತೆಂಗಿನಕಾಯಿಗಳಲ್ಲಿ ಯಾವುದೋ ಒಂದಕ್ಕೆ ಮಾತ್ರ ಕೇವಲ ಒಂದು ಕಣ್ಣು ಮತ್ತು ಬಾಯಿಯ ಗುರುತು (ಮುಖದ ಆಕೃತಿ) ಇರುತ್ತದೆ. ಯಾರಿಗೆ ಈ ಏಕಾಕ್ಷಿ ತೆಂಗಿನಕಾಯಿ ದೊರೆಯುತ್ತದೆಯೋ ಅವರು ಅತ್ಯಂತ ಅದೃಷ್ಟವಂತರು. ಇದನ್ನು ತಂತ್ರಶಾಸ್ತ್ರದಲ್ಲಿ ಅತ್ಯಂತ ಅಮೂಲ್ಯವಾದ ನಿಧಿ ಎಂದು ಪರಿಗಣಿಸಲಾಗಿದೆ.
ಪೂಜಿಸುವ ಸರಳ ವಿಧಾನ ಹೇಗೆ?
ಏಕಾಕ್ಷಿ ತೆಂಗಿನಕಾಯಿಯನ್ನು ಮನೆಗೆ ತಂದ ದಿನ ಶುದ್ಧ ನೀರಿನಿಂದ ಅಥವಾ ಗಂಗಾಜಲದಿಂದ ತೊಳೆದು ಶುದ್ಧೀಕರಿಸಬೇಕು. ಅದಕ್ಕೆ ಅರಿಶಿನ, ಸಿಂಧೂರ ಮತ್ತು ಕುಂಕುಮದಿಂದ ಅಲಂಕರಿಸಿ, ಶುಕ್ರವಾರದಂದು ಶುಭ್ರವಾದ ಕೆಂಪು ಬಣ್ಣದ ರೇಷ್ಮೆ ಬಟ್ಟೆಯ ಮೇಲಿಟ್ಟು ಲಕ್ಷ್ಮಿ ಮಂತ್ರವನ್ನು ಪಠಿಸುತ್ತಾ ಧೂಪ-ದೀಪಗಳಿಂದ ಆರತಿ ಬೆಳಗಬೇಕು. ಅಪ್ಪಟ ಭಕ್ತಿಯಿಂದ ಇದನ್ನು ಪ್ರತಿನಿತ್ಯ ಪೂಜಿಸಿದರೆ, ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ನಿಮ್ಮ ಕುಟುಂಬದ ಮೇಲೆ ಸದಾ ಇರುತ್ತದೆ.
ಈ ಶಕ್ತಿಶಾಲಿ ಕಾಯಿ ಪೂಜಿಸುವುದರಿಂದ ಸಿಗುವ ಲಾಭಗಳು:
ಆರ್ಥಿಕ ಪ್ರಗತಿ ಮತ್ತು ಸಾಲ ಮುಕ್ತಿ: ಪೂಜೆ ಮಾಡಿದ ಈ ಕಾಯಿಯನ್ನು ಹಣ ಇಡುವ ಜಾಗ, ತಿಜೋರಿ ಅಥವಾ ಕಪಾಟಿನಲ್ಲಿ ಇಡುವುದರಿಂದ ಹಣಕಾಸಿನ ಹರಿವು ಹೆಚ್ಚಾಗುತ್ತದೆ. ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಉಳಿಯುತ್ತಿಲ್ಲ, ಸಾಲದ ಬಾಧೆ ಹೆಚ್ಚಾಗಿದೆ ಎನ್ನುವವರು ಇದಕ್ಕೆ ನಿಯಮಿತವಾಗಿ ಕೆಂಪು ಪುಷ್ಪಗಳನ್ನು ಅರ್ಪಿಸಿ ಪೂಜಿಸುವುದರಿಂದ ಸಾಲದ ಸಮಸ್ಯೆಯಿಂದ ಶೀಘ್ರವೇ ಮುಕ್ತಿ ಪಡೆಯಬಹುದು.
ವ್ಯಾಪಾರ-ವ್ಯವಹಾರದಲ್ಲಿ ಡಬಲ್ ಲಾಭ: ವ್ಯಾಪಾರಸ್ಥರು ತಮ್ಮ ಅಂಗಡಿ, ಕಚೇರಿ ಅಥವಾ ವ್ಯವಹಾರದ ಸ್ಥಳದಲ್ಲಿ ಈ ಶಕ್ತಿಶಾಲಿ ಕಾಯಿಯನ್ನು ಇಟ್ಟು ಪೂಜಿಸುವುದರಿಂದ ವ್ಯವಹಾರದಲ್ಲಿ ನಷ್ಟ ದೂರವಾಗಿ ಲಾಭ ದುಪ್ಪಟ್ಟಾಗುತ್ತದೆ.
ಮಾಟ-ಮಂತ್ರ ಹಾಗೂ ನಕಾರಾತ್ಮಕ ಶಕ್ತಿ ನಿವಾರಣೆ: ಮನೆಯಲ್ಲಿರುವ ವಾಸ್ತು ದೋಷ ಹಾಗೂ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುವ ಅಗಾಧ ಶಕ್ತಿ ಇದಕ್ಕಿದೆ. ಯಾವ ಮನೆಯಲ್ಲಿ ಏಕಾಕ್ಷಿ ನಾರಿಕೇಳವನ್ನು ನಿತ್ಯವೂ ಪೂಜಿಸಲಾಗುತ್ತದೆಯೋ, ಆ ಮನೆಯ ಸದಸ್ಯರ ಮೇಲೆ ಯಾವುದೇ ರೀತಿಯ ತಂತ್ರ-ಮಂತ್ರ, ಮಾಟ-ಮಂತ್ರಗಳ ಪ್ರಭಾವ ಬೀರಲ್ಲ
ಕೋರ್ಟ್ ಕೇಸ್ಗಳಲ್ಲಿ ಭರ್ಜರಿ ಜಯ (Lawsuit): ನ್ಯಾಯಾಲಯದ ಕದನದಲ್ಲಿ ಜಯ ಸಿಗಬೇಕಾದರೆ, ಭಾನುವಾರದ ದಿನ ಈ ತೆಂಗಿನಕಾಯಿಯ ಮೇಲೆ ಎದುರಾಳಿಯ ಹೆಸರನ್ನು ಬರೆದು, ಅದರ ಮೇಲೆ ಕೆಂಪು ಕಣಗಿಲೆ (Red Kaner) ಹೂವನ್ನು ಇಡಬೇಕು. ಕೋರ್ಟ್ಗೆ ಹೋಗುವ ದಿನ ಆ ಹೂವನ್ನು ಜೊತೆಯಲ್ಲಿ ಕೊಂಡೊಯ್ದರೆ ತೀರ್ಪು ನಿಮ್ಮ ಪರವಾಗಿ ಬರುವ ಸಾಧ್ಯತೆ ಇರುತ್ತದೆ ಎಂಬ ನಂಬಿಕೆಯಿದೆ.
ಸುಲಭ ಹೆರಿಗೆ ಹಾಗೂ ಸಂತಾನ ಪ್ರಾಪ್ತಿ: ಗರ್ಭಿಣಿ ಮಹಿಳೆಯರು ಹೆರಿಗೆಯಾಗುವ ಮುನ್ನ ಈ ಪವಿತ್ರ ಏಕಾಕ್ಷಿ ತೆಂಗಿನಕಾಯಿಯ ಸುವಾಸನೆಯನ್ನು ಆಸ್ವಾದಿಸಿದರೆ ಹೆರಿಗೆ ಪ್ರಕ್ರಿಯೆ ಸುಲಭವಾಗುತ್ತದೆ. ಹಾಗೆಯೇ, ಸಂತಾನ ಭಾಗ್ಯವಿಲ್ಲದ ಮಹಿಳೆಯರು ತಮ್ಮ ಮುಟ್ಟಿನ ದಿನಗಳ ಮುಕ್ತಾಯದ ನಂತರ, ಕಲ್ಲುಸಕ್ಕರೆ ಹಾಗೂ ಈ ತೆಂಗಿನಕಾಯಿಯ ನೀರನ್ನು ಸೇವಿಸುವುದರಿಂದ ಸಂತಾನ ಪ್ರಾಪ್ತಿಯಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂಬುದು ಸಾಂಪ್ರದಾಯಿಕ ನಂಬಿಕೆ.
ಒಟ್ಟಾರೆಯಾಗಿ, ಕಷ್ಟಗಳನ್ನು ನಿವಾರಿಸಿ, ಸಂಪತ್ತು, ಸಮಾಜದಲ್ಲಿ ಗೌರವ-ಪ್ರತಿಷ್ಠೆ ಮತ್ತು ಸಮೃದ್ಧಿಯನ್ನು ತಂದುಕೊಡುವಲ್ಲಿ ‘ಏಕಾಕ್ಷಿ ನಾರಿಕೇಳ’ ಅತ್ಯಂತ ಶಕ್ತಿಶಾಲಿ ಆಧ್ಯಾತ್ಮಿಕ ಸಾಧನವಾಗಿದೆ.

