ಹೊಸದಿಲ್ಲಿ: ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸರಣಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಹೀನಾಯ ಪ್ರದರ್ಶನದ ಬೆನ್ನಲ್ಲೇ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಸತತ ವೈಫಲ್ಯಗಳಿಂದ ಕಂಗಾಲಾಗಿದ್ದ ಪಂತ್ ಅವರ ರಾಜೀನಾಮೆ ನಿರ್ಧಾರವನ್ನು ಫ್ರಾಂಚೈಸಿ ಅಧಿಕೃತವಾಗಿ ಒಪ್ಪಿಕೊಂಡಿರುವುದಾಗಿ ಶುಕ್ರವಾರ ಪ್ರಕಟಿಸಿದೆ.
2025 ಹಾಗೂ 2026ರ ಸತತ ಎರಡು ಐಪಿಎಲ್ ಸೀಸನ್‌ಗಳಲ್ಲಿ ಲಕ್ನೋ ತಂಡವನ್ನು ಪ್ಲೇಆಫ್ ಹಂತಕ್ಕೇರಿಸಲು ಪಂತ್ ಸಂಪೂರ್ಣ ವಿಫಲರಾದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.
27 ಕೋಟಿ ಮೌಲ್ಯಕ್ಕೆ ತಕ್ಕ ಪ್ರದರ್ಶನ ನೀಡದ ಪಂತ್
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಬರೋಬ್ಬರಿ 27 ಕೋಟಿ ರೂಪಾಯಿಗಳ ದಾಖಲೆಯ ಮೊತ್ತ ನೀಡಿ ರಿಷಭ್ ಪಂತ್ ಅವರನ್ನು ಖರೀದಿಸಿತ್ತು. ಆದರೆ ಸಂಜೀವ್ ಗೋಯೆಂಕಾ ಮಾಲೀಕತ್ವದ ಫ್ರಾಂಚೈಸಿಗೆ ನಿರೀಕ್ಷಿತ ಯಶಸ್ಸು ತಂದುಕೊಡಲು ಪಂತ್‌ಗೆ ಸಾಧ್ಯವಾಗಲಿಲ್ಲ. ಪಂತ್ ನಾಯಕತ್ವದಲ್ಲಿ LSG ತಂಡ 2025ರ ಐಪಿಎಲ್‌ನಲ್ಲಿ 6 ಗೆಲುವುಗಳೊಂದಿಗೆ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆದರೆ ಈ ಬಾರಿಯ (IPL 2026) ಸೀಸನ್‌ನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಆಡಿದ 10 ಪಂದ್ಯಗಳಲ್ಲಿ ಕೇವಲ 4ರಲ್ಲಿ ಮಾತ್ರ ಜಯಗಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಫ್ರಾಂಚೈಸಿ ಅಧಿಕೃತ ಪ್ರಕಟಣೆ:
“ರಿಷಭ್ ಪಂತ್ ಅವರು ತಮ್ಮನ್ನು ನಾಯಕತ್ವದ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ವಿನಂತಿಸಿದ್ದರು. ಫ್ರಾಂಚೈಸಿಯು ಅವರ ಮನವಿಯನ್ನು ಗೌರವಿಸಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಒಪ್ಪಿಕೊಂಡಿದೆ,” ಎಂದು ಲಕ್ನೋ ಸೂಪರ್ ಜೈಂಟ್ಸ್ ಶುಕ್ರವಾರ ಸಂಜೆ 5 ಗಂಟೆಗೆ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ರಿಷಭ್ ಪಂತ್ ನಾಯಕತ್ವದಿಂದ ಕೆಳಗಿಳಿದ ನಿರ್ಧಾರದ ಬಗ್ಗೆ ಮಾತನಾಡಿರುವ ಎಲ್‌ಎಸ್‌ಜಿ ಕ್ರಿಕೆಟ್ ನಿರ್ದೇಶಕ ಟಾಮ್ ಮೂಡಿ, “ಇದು ಅತ್ಯಂತ ಕಠಿಣ ನಿರ್ಧಾರ. ರಿಷಭ್ ಅವರೇ ಖುದ್ದಾಗಿ ಫ್ರಾಂಚೈಸಿಯನ್ನು ಸಂಪರ್ಕಿಸಿ ಈ ವಿನಂತಿ ಮಾಡಿಕೊಂಡಿದ್ದರು, ನಾವು ಅದನ್ನು ಗೌರವಯುತವಾಗಿ ಸ್ವೀಕರಿಸಿದ್ದೇವೆ. ನಾಯಕನಾಗಿ ಅವರು ತಂಡಕ್ಕೆ ನೀಡಿದ ಕೊಡುಗೆಗೆ ನಾವು ಕೃತಜ್ಞರಾಗಿದ್ದೇವೆ. ನಮ್ಮ ಗಮನ ಈಗ ತಂಡದ ಪುನರ್ನಿರ್ಮಾಣದ ಕಡೆಗಿದೆ,” ಎಂದು ಹೇಳಿದ್ದಾರೆ.

