ಢಾಕಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೇ ಹೋಲುವ ಬಾಂಗ್ಲಾದೇಶದ ಆ ಫೇಮಸ್ ಅಲ್ಬಿನೋ (ಬಿಳಿ) ಎಮ್ಮೆಯ ಕಥೆಗೆ ಈಗ ರೋಚಕ ಟ್ವಿಸ್ಟ್ ಸಿಕ್ಕಿದೆ ಈದ್ ಹಬ್ಬದ (Bakri Eid) ಎರಡನೇ ದಿನದ ಬಲಿ ಪ್ರಕ್ರಿಯೆಗೆ ಕೇವಲ ಕೆಲವು ಗಂಟೆಗಳು ಬಾಕಿ ಇರುವಾಗ ಪ್ರವೇಶಿಸಿದ ಬಾಂಗ್ಲಾ ಸರ್ಕಾರ ಮತ್ತು ಪೊಲೀಸರು, ಈ ಅಪರೂಪದ ಪ್ರಾಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ಮುಂದೆ ಇದನ್ನು ಢಾಕಾದ ರಾಷ್ಟ್ರೀಯ ಮೃಗಾಲಯದಲ್ಲಿ ವಿಶೇಷವಾಗಿ ಸಂರಕ್ಷಿಸಲಾಗುವುದು ಮತ್ತು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಜೊತೆ ಜಗಳ ಬೇಡ ಅಂತ ಒಪ್ಪಿಸಿದೆವು ಎಮ್ಮೆಯ ಹೊಸ ಮಾಲೀಕ: ಈ ಎಮ್ಮೆಯನ್ನು ಹಬ್ಬದ ಬಲಿಗಾಗಿ ಇತ್ತೀಚೆಗಷ್ಟೇ ಖರೀದಿಸಿದ್ದ ಕೆರಾನಿಗಂಜ್ ನಿವಾಸಿ ಮೊನಿರುಜ್ಜಮಾನ್ ಎಂಬುವವರು ಮಾತನಾಡಿ, ಪೊಲೀಸರು ಬಂದು ಈ ಎಮ್ಮೆಯನ್ನು ಸಂರಕ್ಷಣೆಗಾಗಿ ಸರ್ಕಾರ ವಶಕ್ಕೆ ಪಡೆಯುತ್ತಿದೆ ಎಂದು ತಿಳಿಸಿದರು. ನಮಗೆ ಸರ್ಕಾರದ ಜೊತೆ ಯಾವುದೇ ಸಂಘರ್ಷ ಬೇಡದ ಕಾರಣ ನಾವು ಎಮ್ಮೆಯನ್ನು ಅವರಿಗೆ ಹಸ್ತಾಂತರಿಸಿದ್ದೇವೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸರ್ಕಾರದಿಂದ ಭಾರಿ ಆಫರ್: ಎಮ್ಮೆಯನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ಮೊನಿರುಜ್ಜಮಾನ್ ಅವರಿಗೆ ಸರ್ಕಾರವು ಸೂಕ್ತ ಹಣಕಾಸಿನ ಪರಿಹಾರ ನೀಡಲಿದೆ ಅಥವಾ ಅದರ ಬದಲಿಗೆ ಮತ್ತೊಂದು ಎಮ್ಮೆ, ಹೋರಿ ಅಥವಾ ಹಸುವನ್ನು ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಕೊನೆ ಕ್ಷಣದ ಭದ್ರತಾ ಕಾಳಜಿ: ಕೊನೆಯ ಕ್ಷಣದಲ್ಲಿ ಈ ಪ್ರಾಣಿ ಮೇಲೆ ಸಾರ್ವಜನಿಕವಾಗಿ ಕಂಡು ಬಂದ ಹಿತಾಸಕ್ತಿ, ಕಾಳಜಿ ಮತ್ತು ಭದ್ರತೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವೈರಸ್‌ನಿಂದಾಗಿ ಪ್ರಾಣಿಗಳನ್ನು ರಕ್ಷಿಸಲು ಮತ್ತು ಸಾರ್ವಜನಿಕರಿಗೆ ಅದನ್ನು ಸುರಕ್ಷಿತವಾಗಿ ನೋಡುವ ಅವಕಾಶ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್ ಎಮ್ಮೆಯ ವಿಶೇಷತೆಗಳೇನು?
ಲುಕ್ ಮತ್ತು ತೂಕ: ಸುಮಾರು 700 ಕೆಜಿ ತೂಕದ ಈ ಎಮ್ಮೆ ಹೊಳೆಯುವ ಹೊಂಬಣ್ಣದ ಕೂದಲು (Blond Hair), ಕೆನೆ ಬಣ್ಣದ ದೇಹ ಮತ್ತು ಗುಲಾಬಿ ಬಣ್ಣದ ಮೂಗನ್ನು ಹೊಂದಿದ್ದು, ನೋಡಲು ಪಕ್ಕಾ ಡೊನಾಲ್ಡ್ ಟ್ರಂಪ್ ಅವರ ಹೇರ್‌ಸ್ಟೈಲ್‌ನಂತೆ ಕಾಣುತ್ತದೆ
ರಾಜಾತಿಥ್ಯ: ಇದರ ಮಾಜಿ ಮಾಲೀಕ, ಆಗ್ರೋ ಫಾರ್ಮ್ ಆಪರೇಟರ್ ಜಿಯಾ ಉದ್ದೀನ್ ಮೃಧಾ ಪ್ರಕಾರ, ಈ ಎಮ್ಮೆಗೆ ಫಾರ್ಮ್‌ನಲ್ಲಿ ದಿನಕ್ಕೆ 4 ಬಾರಿ ಸ್ನಾನ ಮತ್ತು 4 ಬಾರಿ ಊಟ ನೀಡುವ ಮೂಲಕ ರಾಜಾತಿಥ್ಯ ಕೊಡಲಾಗುತ್ತಿತ್ತು
ಹೆಸರು ಬಂದಿದ್ದು ಹೇಗೆ?: ಈ ತಿಂಗಳ ಆರಂಭದಲ್ಲಿ ಈ ಪ್ರಾಣಿ ಜನಪ್ರಿಯವಾದಾಗ ಅದರ ಮಾಲೀಕ ಮಾತನಾಡಿ, “ನನ್ನ ಕಿರಿಯ ಸಹೋದರ ಅದರ ತಲೆಯ ಮೇಲಿನ ಕೂದಲನ್ನು ನೋಡಿ ತಮಾಷೆಯಾಗಿ ಡೊನಾಲ್ಡ್ ಟ್ರಂಪ್ ಎಂದು ಹೆಸರಿಸಿದ್ದ” ಎಂದಿದ್ದಾರೆ.
ಸ್ವಭಾವದಲ್ಲಿ ತುಂಬಾ ಶಾಂತ: ಸಾರ್ವಜನಿಕ ವಲಯದಲ್ಲೂ ಕೂಡ ಈ ಎಮ್ಮೆಯ ಕುರಿತು ವ್ಯಾಪಕ ಪ್ರತಿಕ್ರಿಯೆ ಬರುತ್ತಿದ್ದು, ಈ ಪ್ರಾಣಿ ಪ್ರಕೃತಿಯಲ್ಲಿ ತುಂಬಾ ಶಾಂತವಾಗಿದೆ. ಅಲ್ಬಿನೋ ಎಮ್ಮೆಗಳು ಸಾಮಾನ್ಯವಾಗಿ ಶಾಂತಿಯುತವಾಗಿರುತ್ತವೆ ಮತ್ತು ಪ್ರಚೋದಿಸಲ್ಪಡದ ಹೊರತು ಆಕ್ರಮಣಕಾರಿಯಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೃಗಾಲಯದಲ್ಲಿ ಜಾಗ: ಸದ್ಯ ಈ ಎಮ್ಮೆಗೆ ಮೃಗಾಲಯದ ಕ್ಯುರೇಟರ್ ಅತಿಖುರ್ ರೆಹಮಾನ್ ನೇತೃತ್ವದಲ್ಲಿ ಪ್ರತ್ಯೇಕ ಶೆಡ್ ಮತ್ತು ಒಬ್ಬ ವಿಶೇಷ ಕೇರ್‌ಟೇಕರ್ ಅನ್ನು ನೇಮಕ ಮಾಡಲಾಗಿದೆ. ಇದು ಇನ್ನು ಚಿಕ್ಕ ಪ್ರಾಯದ್ದಾಗಿದ್ದು, ಇನ್ನು ಹಲವು ವರ್ಷ ಬದುಕಲಿದೆ ಎಂದು ಪಶುಸಂಗೋಪನಾ ಇಲಾಖೆ ಹೇಳಿದೆ.
ಬಾಂಗ್ಲಾದೇಶದಲ್ಲಿ ಅಲ್ಬಿನೋ ತಳಿ ಅತ್ಯಂತ ಅಪರೂಪ
ಸಾಮಾನ್ಯವಾಗಿ ಬಾಂಗ್ಲಾದೇಶದಲ್ಲಿ ಕಡು ಕಪ್ಪು ಬಣ್ಣದ ಎಮ್ಮೆಗಳಿರುತ್ತವೆ. ಆದರೆ ಈ ಅಲ್ಬಿನೋ ತಳಿಯ ಎಮ್ಮೆ ಸಂಪೂರ್ಣ ವಿಭಿನ್ನವಾಗಿದ್ದರಿಂದ, ಈದ್ ಹಬ್ಬದ ಮಾರುಕಟ್ಟೆಗೆ ಬಂದ ಸಾವಿರಾರು ಜಾನುವಾರುಗಳ ಮಧ್ಯೆ ಇದು ಎಲ್ಲರ ಗಮನ ಸೆಳೆದು ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗಿತ್ತು. ಕೊನೆಗೂ ಸಾರ್ವಜನಿಕರ ಅಪಾರ ಆಸಕ್ತಿಯಿಂದಾಗಿ ಈ ಟ್ರಂಪ್ ಎಮ್ಮೆ ಹಬ್ಬದ ಬಲಿಯಿಂದ ಬಚಾವಾಗಿ ಮೃಗಾಲಯ ಸೇರಿದೆ

