ಬೆಂಗಳೂರು : ಕರ್ನಾಟಕ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ನಾಯಕತ್ವ ಬದಲಾವಣೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 3 ಗಂಟೆಗೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಉಪಹಾರ ಸಭೆಯಲ್ಲಿ (ಬ್ರೇಕ್‌ಫಾಸ್ಟ್ ಮೀಟಿಂಗ್), ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆಯ ನಿರ್ಧಾರವನ್ನು ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ ಸಂವಿಧಾನಾತ್ಮಕ ಪ್ರಕ್ರಿಯೆಯಂತೆ, ಸಿಎಂ ಮಧ್ಯಾಹ್ನ 3 ಗಂಟೆಗೆ ಲೋಕಭವನಕ್ಕೆ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ.
ಇಂದು ನಡೆದ ಬ್ರೇಕ್ ಫಾಸ್ಟ್ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯನವರ ಪಾದ ಮುಟ್ಟಿ ನಮಸ್ಕರಿಸುವ ಮೂಲಕ ಪಕ್ಷದಲ್ಲಿ ಒಗ್ಗಟ್ಟಿದೆ ಎಂಬ ಸಂದೇಶವನ್ನು ರವಾನಿಸಿದರು . ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಸಂಜೆ ಅಥವಾ ತಡರಾತ್ರಿಯೊಳಗೆ ಬೆಂಗಳೂರಿಗೆ ಮರಳುವ ನಿರೀಕ್ಷೆಯಿದೆ. ಅವರ ಆಗಮನದ ನಂತರ ರಾಜೀನಾಮೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ .
ರಾಜಕೀಯ ಅನಿವಾರ್ಯತೆ ಮತ್ತು ಹೈಕಮಾಂಡ್‌ನ ಸೂಚನೆಯ ಮೇರೆಗೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ವರದಿ ಮಾಡಿವೆ. ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುರಿತು ಚರ್ಚೆಗಳು ಈಗ ಮುನ್ನೆಲೆಗೆ ಬಂದಿವೆ.

